ಕಾರ್ಮಿಕ ವಿರೋಧಿ ಹೊಸ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ತಿ.ನರಸೀಪುರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಸಿ.ಪುಟ್ಟಮಲ್ಲಯ್ಯ, ಸಿ.ಬಿ.ನವೀನ್ ಕುಮಾರ್, ಶಶಿಕುಮಾರ್, ಕೇತುಪುರ ನಾಗರಾಜು, ಶಕುಂತಲಾ ಇತರರು ಇದ್ದರು. 
ಮೈಸೂರು

ತಿ.ನರಸೀಪುರದಲ್ಲಿ ಡಿವೈಎಫ್‌ಐ ಮೆರವಣಿಗೆ

ರವಿಕುಮಾರ್ ಪಿ. ಕೆ
ತಿ.ನರಸೀಪುರ: ಕಾರ್ಮಿಕ ವಿರೋಧಿಯಾಗಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕೆಎಸ್‌ಆರ್‌ಟಿಸಿಬಸ್ ನಿಲ್ದಾಣ, ಚಿತ್ರಮಂದಿರ ವೃತ್ತ ಮಾರ್ಗವಾಗಿ ತಾಲೂಕು ಕಚೇರಿ ಆವರಣವನ್ನು ತಲುಪಿತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಸಾಗಿದ ಪ್ರತಿಭಟನಾಕಾರರು ಕೆಲ ತಾಸು ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.
ಡಿವೈಎಫ್‌ಐ ತಾಲೂಕು ಘಟಕದ ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಹಳೇ 29 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಕಾರ್ಮಿಕರ ವೇತನ, ಕೆಲಸದ ಅವಧಿ, ಪಿಂಚಣಿ, ಉದ್ಯೋಗ ಭದ್ರತೆ ಮತ್ತು ರಜೆ ಸೇರಿದಂತೆ ಉದ್ಯಮದಾರರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲಾಗಿದೆ. ಇದರಿಂದ ಖಾಸಗಿ ವಲಯದಲ್ಲಿ ದುಡಿಯುವ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅವೈಜ್ಞಾನಿಕ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಅಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದರು. ಕೇಂದ್ರ ಸರ್ಕಾರಕ್ಕೆ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾ.ಪಂ.ನೌಕರರ ಸಂಘದ ತಾಲೂಕು ಅಧ್ಯಕ್ಷ ಕೇತುಪುರ ನಾಗರಾಜು, ಗ್ರಾ.ಪಂ. ಸ್ವಚ್ಛತಾ ವಾಹಿನಿ ಮುಖಂಡರಾದ ದಿವ್ಯಾ, ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ಕೃಷ್ಣ, ಶಕುಂತಲಾ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಸಿ.ಬಿ.ನವೀನ್ ಕುಮಾರ್, ಸಿ.ಬಿ.ಮಲ್ಲೇಶ, ಎಂ.ಶಿವಲಿಂಗಶೆಟ್ಟಿ ಗೋವಿಂದ, ಜಯರಾಮ್, ಜಿ.ಆರ್.ಮಹೇಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಉಮಾ, ಪದಾಧಿಕಾರಿಗಳಾದ ಸಾವಿತ್ರಮ್ಮ, ಗೌರಮ್ಮ, ಭಾರತಿ, ಪದ್ಮಾ, ರುಕ್ಮಿಣಿ, ನಾಗಮ್ಮ, ಲಕ್ಷ್ಮೀ, ಸುಭದ್ರ, ಪ್ರೇಮಾ, ಸರಿತಾ, ಯಶೋದಾ ಇತರರು ಇದ್ದರು.