- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ
- ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕ ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ
- ತಂಬಾಕು ಮಾರುಕಟ್ಟೆಗೆ ಸ್ಥಿರತೆ ತರುವ ನಿರೀಕ್ಷೆ
ಮೈಸೂರು: ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಫೆ.5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕ ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇದರಿಂದ ತಂಬಾಕು ಬೆಳೆಗಾರರು ಮತ್ತು ಈ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಈ ಕ್ರಮದಿಂದ ರೈತರು ಮತ್ತು ವ್ಯಾಪಾರಿಗಳ ದೀರ್ಘಕಾಲೀನ ಬೇಡಿಕೆ ಈಡೇರಿದಂತಾಗಿದೆ. ತಂಬಾಕು ಮಾರುಕಟ್ಟೆಗೆ ಸ್ಥಿರತೆ ತರುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಸಕಾಲಿಕ ಕ್ರಮಗಳು ವ್ಯಾಪಾರದಲ್ಲಿ ನಿರಂತರತೆ ಒದಗಿಸುತ್ತದೆ, ರೈತರ ವಿಶ್ವಾಸ ಬಲಪಡಿಸುತ್ತದೆ. ಸಾವಿರಾರು ತಂಬಾಕು ಬೆಳೆಯುವ ಕುಟುಂಬಗಳ ಜೀವನೋಪಾಯಕ್ಕೆ ಆದ್ಯತೆ ನೀಡಲಿದೆ ಎಂದರು.
ರೈತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಕೃಷಿ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆ ಪರಿಹರಿಸಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.