ಕೈಗಾರಿಕೋದ್ಯಮಿಗಳು, ಬಾಡಿಗೆ ಉದ್ಯಮಿಗಳೊಂದಿಗೆ ಪೊಲೀಸರ ಸಭೆ 
ಮೈಸೂರು

ಡ್ರಗ್ಸ್ ಕೇಸ್: ಪರಿಶೀಲಿಸಿ ಕಟ್ಟಡವನ್ನು ಬಾಡಿಗೆಗೆ ನೀಡಲು ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಮಾಲೀಕರು, ಪೂರ್ವಾಪರ ಪರಿಶೀಲಿಸಿ ನಂತರ ಉದ್ಯಮಿಗಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಬೇಕು
  • ಅಂತರ ಜಿಲ್ಲಾ ಮತ್ತು ಅಂತರರಾಜ್ಯ ಕಾರ್ಮಿಕರ ಪೂರ್ವಾಪರ, ಅಪರಾಧಿಕ ಹಿನ್ನೆಲೆಯ ಕುರಿತು ಕಡ್ಡಾಯವಾಗಿ ಪೊಲೀಸರಿಂದ ಪರಿಶೀಲಿಸಿಕೊಳ್ಳಬೇಕು.
ಮೈಸೂರು: ಡ್ರಗ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ನಗರದ ಎಲ್ಲ ಕೈಗಾರಿಕೋದ್ಯಮಿಗಳು, ಬಾಡಿಗೆ ಉದ್ಯಮಿಗಳೊಂದಿಗೆ ನಗರದ ಹೆಬ್ಬಾಳದ ಕೆ.ಸಿ.ಜಿ ಸಮುದಾಯಭವನದಲ್ಲಿ ಗುರುವಾರ ಸಭೆ ನಡೆಸಿದರು. ಕೆಲ ಸೂಚನೆಗಳನ್ನು ನೀಡಿದ್ದಾರೆ.
ಕಟ್ಟಡ ಮಾಲೀಕರು, ಪೂರ್ವಾಪರ ಪರಿಶೀಲಿಸಿ ನಂತರ ಉದ್ಯಮಿಗಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಬೇಕು. ಉದ್ದಿಮೆದಾರರು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅಂತರ ಜಿಲ್ಲಾ ಮತ್ತು ಅಂತರರಾಜ್ಯ ಕಾರ್ಮಿಕರ ಪೂರ್ವಾಪರ, ಅಪರಾಧಿಕ ಹಿನ್ನೆಲೆಯ ಕುರಿತು ಕಡ್ಡಾಯವಾಗಿ ಪೊಲೀಸರಿಂದ ಪರಿಶೀಲಿಸಿಕೊಳ್ಳಬೇಕು. ನಂತರ ನೇಮಿಸಿಕೊಳ್ಳುವಂತೆ ತಿಳಿಸಲಾಯಿತು.
ಕಾರ್ಖಾನೆಗಳ ಮಾಲೀಕರು ಸಂಬಂಧಪಟ್ಟ ಇಲಾಖೆಗಳಿಂದ ನಿಗದಿತ ಪರವಾನಿಗೆ ಪಡೆದುಕೊಂಡು ಕಾರ್ಖಾನೆ ನಡೆಸಬೇಕು ಎಂದು ಸೂಚಿಸಲಾಯಿತು.
ಕಟ್ಟಡವನ್ನು ಬಾಡಿಗೆ ನೀಡಿದ ನಂತರ ಅಲ್ಲಿ ನಿಗದಿತ ಉದ್ದೇಶದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕಟ್ಟಡ ಮಾಲೀಕರು ಕಾಲಕಾಲಕ್ಕೆ ನಿಗಾ ವಹಿಸಬೇಕು. ಒಂದು ವೇಳೆ ಅಂತಹ ಕಟ್ಟಡಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲು ನಿರ್ದೇಶಿಸಲಾಯಿತು.
ಪ್ರಮುಖವಾಗಿ ರಾಸಾಯನಿಕ ಹಾಗೂ ಸುಗಂಧ ದ್ರವ್ಯಗಳ ಉತ್ಪಾದನಾ ಘಟಕಗಳ ಮೇಲೆ ಪೊಲೀಸರು ತಪಾಸಣೆ ನಡೆಸಿ ಹೆಚ್ಚಿನ ಕಣ್ಗಾವಲು ನಡೆಸುತ್ತಿದ್ದು, ಅಂತಹ ಘಟಕಗಳಲ್ಲಿ ಅಕ್ರಮ ಹಣ ಸಂಪಾದಿಸುವ ಉದ್ದೇಶದಿಂದ ಸಂಶಯಾಸ್ಪದ ಚಟುವಟಿಕೆ ನಡೆಸುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಲಾಯಿತು.
ಸಭೆಯಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಪರಿಸರ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ, ಇತರ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಮೈಸೂರು ನಗರದಲ್ಲಿರುವ ಕೈಗಾರಿಕಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಪೊಲೀಸರ ಕರ್ತವ್ಯಕ್ಕೆ ಸಹಮತ ವ್ಯಕ್ತಪಡಿಸಿದರು.