ಹುಣಸೂರು ತಾಲೂಕು ಮುಳ್ಳೂರು ಕ್ಲಸ್ಟರ್‌ನ ತೊಂಡಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಡಾ.ಹರ್ಷಿತಕುಮಾರ್ ಸಂಪನ್ಮೂಲ ವ್ಯಕ್ತಿ ವಸಂತಕುಮಾರ, ಮುಖ್ಯಶಿಕ್ಷಕ ಶ್ರೀನಿವಾಸ, ದೇವರಾಜು, ಇತರರಿದ್ದರು.
ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಅಭಿಮತ
ಹುಣಸೂರು: ಮಾದಕ ವಸ್ತುಗಳ ಅಕ್ರಮ ಬಳಕೆ ಮತ್ತು ಮಾರಾಟ ಇಂದು ಜಾಗತಿಕ ಸಮಸ್ಯೆಯಾಗಿದ್ದು, ವ್ಯಕ್ತಿಯ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಮಾರಕವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಹೇಳಿದರು.
ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಕ್ಲಸ್ಟರ್ ತೊಂಡಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ತೊಂಡಾಳು ಆಯುಷ್ಮಾನ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಲಾ ಮಕ್ಕಳಿಗೆ ಜುಲೈ ತಿಂಗಳ 3ನೇ ಸಂಭ್ರಮ ಶನಿವಾರದಂದು ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಸಂಬಂಧ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಕೌಟುಂಬಿಕ ಬೆಂಬಲ ಹಾಗೂ ಕಟ್ಟುನಿಟ್ಟಾದ ಕಾನೂನು ಜಾರಿ ಮೂಲಕ ಈ ಪಿಡುಗನ್ನು ತಡೆಗಟ್ಟಿ, ವ್ಯಸನಿಗಳ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬಹುದು. ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಯುವಸಮೂಹವನ್ನು ಇಂತಹ ವ್ಯಸನದಿಂದ ಪ್ರೇರೇಪಿತರಾಗದಂತೆ ತಡೆಗಟ್ಟಬಹುದಾಗಿದೆ. ಮಾದಕ ವಸ್ತು ಮತ್ತು ದೇಶಕ್ಕೆ ಮತ್ತು ಸಮುದಾಯಕ್ಕೆ ಶಾಪವೇ ಹೊರತು ಸಂಪನ್ಮೂಲಗಳಾಗಲು ಸಾಧ್ಯವಿಲ್ಲ ಎಂದರು.
ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಡಾ.ಹರ್ಷಿತಕುಮಾರ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು, ಕಾಯಿಲೆಗಳು, ತಡೆಗಟ್ಟಲು ಇರುವ ವೈದ್ಯಕೀಯ ಚಿಕಿತ್ಸೆಗಳು, ಕಾನೂನಾತ್ಮಕ ಕ್ರಮಗಳ ಬಗ್ಗೆ ಸುದೀರ್ಘವಾಗಿ ಮಕ್ಕಳಿಗೆ ತಿಳಿಸಿದರು. ಭಾಗವಹಿಸಿದ ಶಾಲೆಯ ಎಲ್ಲ ಮಕ್ಕಳಿಗೆ ಮತ್ತು ಪಾಲಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ, ಮಾಜಿ ಅಧ್ಯಕ್ಷ ಆಶೋಕ, ಮುಖ್ಯಶಿಕ್ಷಕ ಶ್ರೀನಿವಾಸ, ಸಹ ಶಿಕ್ಷಕ ದೇವರಾಜು, ದೀಪಾ, ಆಶಾ ಕಾರ್ಯಕರ್ತೆ ಮಂಗಳಮ್ಮ, ಬೇಬಿ, ಪಾಲಕರು, ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.