ಅಪಘಾತ 
ಮೈಸೂರು

ಚಾಲಕನ ನಿರ್ಲಕ್ಷೃ ಸರಣಿ ಅಪಘಾತ

ತಿ.ನರಸೀಪುರ ರಸ್ತೆಯ ಆಲನಹಳ್ಳಿ ಬಳಿ ಶನಿವಾರ ಬೆಳಗ್ಗೆ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಮೂರು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಿ.ನರಸೀಪುರದಿಂದ ಮೈಸೂರಿಗೆ ಬರುತ್ತಿದ್ದ ಖಾಸಗಿ ಬಸ್‌ನ ಚಾಲಕ ಪ್ರಯಾಣಿಕರನ್ನು ಇಳಿಸಲು ತಕ್ಷಣ ಬಸ್ ನಿಲ್ಲಿಸಿದ್ದು, ಹಿಂದಿನಿಂದ ಬರುತ್ತಿದ್ದ ನಗರ ಸಾರಿಗೆ ಬಸ್‌ನ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾರೆ.
ಇದರ ಹಿಂದೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ಡಿಕ್ಕಿ ಹೊಡೆದಿದೆ. ನಗರ ಸಾರಿಗೆ ಬಸ್ ಕೂಡ ಮುಂದಿನ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಮೂರು ಬಸ್‌ಗಳು ಜಖಂಡಗೊಂಡಿದ್ದು, ಮೂರು ಬಸ್‌ನ ಚಾಲಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.