ಸರಗೂರು ತಾಲೂಕಿನ ಜಯಲಕ್ಷ್ಮೀಪುರ ಗ್ರಾಮಸ್ಥರು ನೀರಿಗಾಗಿ ಟ್ಯಾಂಕ್ ಮೂಲಕ ಮಹಿಳೆಯರ ಪರದಾಡುತ್ತಿರುವುದು. 
ಮೈಸೂರು

ಮನೆ ಮನೆಗೆ ತಲುಪದ ಕುಡಿಯುವ ನೀರು

ಸರಗೂರು: ಜಲಜೀವನ ಮಿಷನ್ (ಜೆಜೆಎಂ)ಯೋಜನೆಯಡಿ ತಾಲೂಕಿನ ಜಯಲಕ್ಷ್ಮೀಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳು ಕಳಪೆಯಾಗಿದ್ದು, ಮನೆಯ ನಲ್ಲಿಗಳಿಗೆ ನೀರು ಸರಬರಾಜು ಮಾಡಲು ಮುಂದಾಗಿಲ್ಲ. ಸರ್ಕಾರದ ಕೋಟ್ಯಂತರ ರೂಪಾಯಿ ನಿರುಪಯುಕ್ತವಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಶ್ನಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷ್ಮೀಪುರ ಗ್ರಾಮಸ್ಥರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಕಲುಷಿತ ನೀರನ್ನೇ ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಖಾಸಗಿ ಜಮೀನಿಗೆ ಅಲೆದಾಡುತ್ತಾ ಎರಡು ತಿಂಗಳಿಂದ ಪರದಾಡುತ್ತಿದ್ದೇವೆ. ಈಗ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದಾರೆ. ಅದು ಕುಡಿಯಲು ಯೋಗ್ಯವಿಲ್ಲದ ನೀರು. ಮನುಷ್ಯರಿಗೂ ಪ್ರಾಣಿಗಳಿಗೂ ವ್ಯತ್ಯಾಸ ಇಲ್ಲವೇ ಎಂಬುದನ್ನು ಜಯಲಕ್ಷ್ಮೀಪುರ ಗ್ರಾಮಸ್ಥರು ಜೆಜೆಎಂ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗುಣಮಟ್ಟದ ಪೈಪ್ ಹಾಕದೆ ಕಳಪೆ ಪೈಪ್ ಅಳವಡಿಸಿದ್ದಾರೆ. ಕೆಲ ನಲ್ಲಿಗಳು ಹಾಳಾಗಿವೆ. ನಲ್ಲಿಯ ಸಣ್ಣ ಪೈಪ್ ಕೂಡ ಗುಣಮಟ್ಟದಲ್ಲ. ಕೆಲವೆಡೆ ಮನೆಯ ಗೋಡೆ, ಚರಂಡಿ ಪಕ್ಕ ಎಲ್ಲೆಂದರಲ್ಲಿ ಸಿಮೆಂಟ್ ಸ್ಲ್ಯಾಬ್‌ಗಳನ್ನು ಹಾಕಿ ನಲ್ಲಿ ಅಳವಡಿಸಿದ್ದಾರೆ. ಸಿಸಿ ರಸ್ತೆಗಳನ್ನು ಯದ್ವಾತದ್ವಾ ಕಿತ್ತು ಹಾಕಲಾಗಿದೆ. ರಸ್ತೆಯನ್ನು ಪೈಪ್ ಹಾಕುವ ಜಾಗಕ್ಕೆ ಅನುಗುಣವಾಗಿ ಕತ್ತರಿಸದೆ ಜೆಸಿಬಿ ಬಳಸಿ ಅಗೆಯಲಾಗಿದೆ... ಹೀಗೆ ಹತ್ತಾರ ಆರೋಪಗಳನ್ನು ಜನರು ಥಟಥಟನೆ ಹೇಳುತ್ತಾರೆ.ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ಇದ್ದು, ಭೋವಿ
ಜನಾಂಗದ ಸಮುದಾಯದವರೂ ಇಲ್ಲಿ ನೆಲೆಸಿದ್ದಾರೆ. ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ. ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋದರೆ, ಬರುವುದು ಸಂಜೆ. ಬೆಳಗ್ಗೆ ಮತ್ತು ಸಂಜೆ ಕುಡಿಯುವ ನೀರನ್ನು ಸಂಗ್ರಹಿಸುವುದೇ ಸಮಸ್ಯೆಯಾಗಿದ್ದು, ಅಕ್ಕ ಪಕ್ಕದ ಹೊಲಗದ್ದೆಗಳಲ್ಲಿ ಕೃಷಿಗೆ ನೀರು ಹಾಯಿಸುವವರನ್ನು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
ಜೆಜೆಎಂ ಯೋಜನೆಯಡಿ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿ ಮಾಡಿ ಪ್ರತಿ ಮನೆಗೂ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಒಂದು ದಿನವೂ ನಲ್ಲಿ ಮೂಲಕ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿಲ್ಲ. ಯಾಕಂದರೆ ಸರಿಯಾದ ರೀತಿಯಲ್ಲಿ ಪೈಪ್‌ಲೈನ್ ಕೆಲಸ ಮಾಡಿಲ್ಲ. ನೈರ್ಮಲ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ನಮ್ಮ ಗ್ರಾಮದಲ್ಲಿ ಜೆಜೆಎಂ ಹೆಸರಿನಲ್ಲಿ ಗುತ್ತಿಗೆದಾರರು ಮನೆ ಮನೆಗೆ ನೀರು ನೀಡುವ ಕೆಲಸ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೆಲಸ ಮಾಡಿ ಒಂದು ವರ್ಷ ಕಳೆದರೂ ಇದರ ಬಗ್ಗೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಗಮನಹರಿಸಿದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಗ್ರಾಮದ ಮನೆಯ ನಲ್ಲಿಗಳಲ್ಲಿ ನೀರು ಬರುವುತ್ತಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಇದರ ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಮಹಿಳೆಯರು ಹಾಗೂ ಮುಖಂಡರು ಇಲ್ಲಿನ ಸಮಸ್ಯೆ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು. ಕೂಡಲೇ ಕಳೆದ ತಿಂಗಳಿಂದ ಪಂಚಾಯಿತಿ ವತಿಯಿಂದ ಟ್ಯಾಂಕ್ ಮೂಲಕ ನೀರು ಪೂರೈಸುತ್ತಿದ್ದಾರೆ. ಆದರೆ ಅದು ಕುಡಿಯುವ ಸ್ಥಿತಿಯಲ್ಲಿಲ್ಲ. ನಮಗೂ ಪ್ರಾಣಿಗಳಿಗೂ ವ್ಯಾತ್ಯಾಸ ಇಲ್ಲವೇ?. ಗ್ರಾಮದಲ್ಲಿರುವ ಜಮೀನಿನ ಕೊಳವೆಬಾವಿ ನೀರನ್ನು ಪಡೆಯುತ್ತಿದ್ದೇವೆ. ಆದರೆ, ಅಲ್ಲಿಯೂ ನೀರಿನ ಸಮಸ್ಯೆ ಇದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.