ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
- ಚಾಮರಾಜನಗರ ಜಿಲ್ಲೆಯ ಜವಾಬ್ದಾರಿಯನ್ನೂ ಹೆಚ್ಚುವರಿ
- ಕೇವಲ 8 ವರ್ಷದ ರಾಜಕೀಯ ಜೀವನದಲ್ಲಿ ತ್ವರಿತಗತಿಯಲ್ಲಿ ಬಡ್ತಿ
ಮೈಸೂರು: ವಿಧಾನ ಪರಿಷತ್ ಸದಸ್ಯರೂ ಆಗಿರುವ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದು, ಇದರೊಂದಿಗೆ ನೆರೆಯ ಚಾಮರಾಜನಗರ ಜಿಲ್ಲೆಯ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ವಹಿಸಲಾಗಿದೆ.
ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ತಕ್ಷಣದಿಂದ ಜಾರಿಗೆ ಬರುವಂತೆ 13 ಸಚಿವರಿಗೂ ಈ ಹೊಣೆಗಾರಿಕೆ ನೀಡಲಾಗಿದೆ.
ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಡಾ.ಯತೀಂದ್ರ ಗಿಟ್ಟಿಸಿಕೊಂಡಿದ್ದು, ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಆಗಿದ್ದರು. ಅವರಿಗೆ ಮೊದಲ ಹಂತದ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ, ಡಾ.ಯತೀಂದ್ರ ಅವರಿಗೆ ಅದೃಷ್ಟ ಖುಲಾಯಿಸಿದೆ.
ಕಳೆದ ಸಲ ವರುಣ ಕ್ಷೇತ್ರದ ಶಾಸಕರಾಗಿದ್ದ ಡಾ.ಯತೀಂದ್ರ, ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಅವರ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. 2023ರ ಚುನಾವಣೆಯಲ್ಲಿ ಗೆದ್ದು ಈ ಕ್ಷೇತ್ರದ ಪ್ರತಿನಿಧಿಯಾಗಿ 2ನೇ ಬಾರಿಗೆ ಮುಖ್ಯಮಂತ್ರಿ ಸಹ ಆಗಿದ್ದರು.
ಮತ್ತೊಂದೆಡೆ, ವಿಧಾನಸಭೆ ಸ್ಥಾನ ಕಳೆದುಕೊಂಡಿದ್ದ ಯತೀಂದ್ರ, ಮೇಲ್ಮನೆಯ ಸದಸ್ಯರಾಗಿ, ಸಚಿವರಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಅದೃಷ್ಟವೇ ಸರಿ. ಕೇವಲ 8 ವರ್ಷದ ರಾಜಕೀಯ ಜೀವನದಲ್ಲಿ ತ್ವರಿತಗತಿಯಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ.