ಕಲಾ ಪ್ರಕಾರಗಳು ವ್ಯಕ್ತಿತ್ವಕ್ಕೆ ಮಹತ್ವ ತಂದು ಕೊಡುತ್ತವೆ ಎಂದು ಭರತನಾಟ್ಯ ವಿದ್ವಾಂಸ ಪ್ರೊ.ಕೆ.ರಾಮಮೂರ್ತಿ ರಾವ್ ಹೇಳಿದರು. ನಗರದ ಜೆಎಲ್‌ಬಿ ರಸ್ತೆಯ ಆರಾಧ್ಯ ಸಭಾ ಭವನದಲ್ಲಿ ನೃತ್ಯಾಲಯ ಸಂಸ್ಥೆಯ ಹಿರಿಯ ವಿದುಷಿ ಡಾ. ತುಳಸೀ ರಾಮಚಂದ್ರ ಅವರ ನಿರ್ದೇಶನದಲ್ಲಿ ಭಾನುವಾರ ಆಯೋಜಿಸಿದ್ದ ನರ್ತನ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಅಂಕ ಪಡೆಯಬೇಕು, ರ‌್ಯಾಂಕ್ ಗಳಿಸಬೇಕು ಎಂಬ ಸ್ಪರ್ಧೆಗಳೇ ಇಂದು ಹೆಚ್ಚಾಗಿದೆ. ಪ್ರದರ್ಶನ ಕಲೆಗಳ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಪಾಲಕರು ಗಮನಹರಿಸಿ, ಮಕ್ಕಳಿಗೆ ಸಂಗೀತ, ನೃತ್ಯಾಭ್ಯಾಸಕ್ಕೂ ಪ್ರೋತ್ಸಾಹ ತುಂಬಬೇಕು. ವಿದ್ಯಾರ್ಜನೆಯೊಂದಿಗೆ ಒಂದಾದರೂ ಕಲೆಯನ್ನು ಕರಗತ ಮಾಡಿಕೊಂಡರೆ ವ್ಯಕ್ತಿತ್ವಕ್ಕೆ ಮಹತ್ವ ಬರುತ್ತದೆ ಎಂದರು.
ಡಾ. ತುಳಸೀ ರಾಮಚಂದ್ರ ಅವರ ನಿರ್ದೇಶನದಲ್ಲಿ ಭಾವಯಾಮಿ ನೃತ್ಯರೂಪಕ ಮನೋಜ್ಞವಾಗಿ ಮೂಡಿ ಬಂದಿದೆ. ಯುವ ಕಲಾವಿದರು ಗುರುವಿನ ಮಾರ್ಗದಲ್ಲಿ ಸಾಗಿದರೆ ಇನ್ನಷ್ಟು ಕೀರ್ತಿ ಲಭಿಸುತ್ತದೆ. ಕಳೆದ 4 ದಶಕಗಳಿಂದ ನೃತ್ಯಾಲಯ ಸಂಸ್ಥೆ ನಾಡಿಗೆ ಉತ್ತಮ ಯುವ ಕಲಾವಿದರನ್ನು ನೀಡಿದೆ. ಕಲಾ ಸೇವೆಗೆ ಎಂದಿಗೂ ಮನ್ನಣೆ ಇದ್ದೇ ಇರುತ್ತದೆ ಎಂದವರು ಹೇಳಿದರು.
ಹಿರಿಯ ವಿದುಷಿ ಡಾ. ತುಳಸೀ ರಾಮಚಂದ್ರ ಮಾತನಾಡಿ, ಮಕ್ಕಳಲ್ಲಿ ಅಗಾಧ ಪ್ರತಿಭೆ ಇರುತ್ತದೆ. ಅದನ್ನು ಹೊರ ತರುವಲ್ಲಿ ಪಾಲಕರ ಸಹಕಾರವೂ ಬೇಕು ಎಂದರು. ನರ್ತನ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಸಾದನದಿಂದ ಹಿಡಿದು ವಿವಿಧ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರೇ ನಿರ್ವಹಣೆ ಮಾಡಿದ್ದಾರೆ. ಕಲೆಗಳು ಸಮಾಜಕ್ಕೆ ತಲುಪುವ ನಿಟ್ಟಿನಲ್ಲಿ ಇಂಥ ಸಹಕಾರಗಳೂ ಮಹತ್ವದ್ದಾಗಿವೆ ಎಂದವರು ತಿಳಿಸಿದರು.
ತುಳಸಿ ರಾಮಚಂದ್ರ ಅವರ ಶಿಷ್ಯರು 3 ತಾಸುಗಳ ಕಾಲ ನೃತ್ಯ ಪ್ರದರ್ಶನ ಮಾಡಿ ಸಭಿಕರನ್ನು ರಂಜಿಸಿದರು. ಹಿರಿಯ ಗಮಕಿ ಕೃಷ್ಣಗಿರಿ ರಾಮಚಂದ್ರ, ಶೈಲಜಾ ಶಂಕರ್, ಪ್ರೀತಿ ಶ್ರೀಕಾಂತ್, ಲತಾ ರಾಮಮೂರ್ತಿ ಇತರರಿದ್ದರು. ಇದೇ ಸಂದರ್ಭ ಪ್ರೊ. ರಾಮಮೂರ್ತಿ ರಾವ್ ಅವರನ್ನು ನೃತ್ಯಾಲಯ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಚಿತ್ರ ಸಂಖ್ಯೆ...2
*ನಗರದ ಜೆಎಲ್‌ಬಿ ರಸ್ತೆ ರಸ್ತೆಯ ಆರಾಧ್ಯ ಸಭಾ ಭವನದಲ್ಲಿ ನೃತ್ಯಾಲಯ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ನರ್ತನ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರೊ. ರಾಮಮೂರ್ತಿ ರಾವ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದುಷಿ ಡಾ.ತುಳಸೀ ರಾಮಚಂದ್ರ, ಹಿರಿಯ ಗಮಕಿ ಕೃಷ್ಣಗಿರಿ ರಾಮಚಂದ್ರ, ಶೈಲಜಾ ಶಂಕರ್, ಪ್ರೀತಿ ಶ್ರೀಕಾಂತ್, ಲತಾ ರಾಮಮೂರ್ತಿ ಇತರರಿದ್ದರು.