ಡಾ.ಸುಶ್ರುತ ಗೌಡ 
ಮೈಸೂರು

ಜನರ ಸೇವೆಯೇ ಡಾ.ಸುಶ್ರುತ ಗೌಡರ ಮಂತ್ರ

ಪ್ರಮುಖ ಮುಖ್ಯಾಂಶಗಳು

  • ಸಮಾಜಮುಖಿ ಕಾರ್ಯದಲ್ಲೂ ಮುಂದು

ಅಮೆರಿಕದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ನರವೈದ್ಯ ಹಾಗೂ ಸ್ಟ್ರೋಕ್ ತಜ್ಞರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಬಳಿಕ ತಾಯ್ನಡಿನ ಜನರ ಆರೋಗ್ಯ ಸೇವೆಗಾಗಿ ಮೈಸೂರಿಗೆ ಮರಳಿರುವ ಡಾ.ಸುಶ್ರುತ ಗೌಡ ಅವರು ವೈದ್ಯಕೀಯ ಸೇವೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೈಸೂರಿನ ಹೆಸರಾಂತ ವೈದ್ಯ ಹಾಗೂ ಸಮಾಜಮುಖಿ ಚಿಂತಕರಾದ ದಿವಂಗತ ಡಾ.ಎಚ್.ಸಿ. ವಿಷ್ಣುಮೂರ್ತಿ ಮತ್ತು ಡಾ. ರೇಖಾಮೂರ್ತಿ ಪುತ್ರರು. 1978ರಲ್ಲಿ ಡಾ. ವಿಷ್ಣುಮೂರ್ತಿ ಅವರು ಸ್ಥಾಪಿಸಿದ ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆ ಕೇವಲ 10 ಹಾಸಿಗೆಗಳ ಆಸ್ಪತ್ರೆಯಾಗಿ ಆರಂಭವಾಗಿತ್ತು. ಇಂದು 250 ಹಾಸಿಗೆಗಳ ಅತ್ಯಾಧುನಿಕ ಬಹು ವಿಶೇಷತೆಗಳ ಆಸ್ಪತ್ರೆ, ನರ್ಸಿಂಗ್ ಕಾಲೇಜು ಹಾಗೂ ಆರೋಗ್ಯ ಶಿಕ್ಷಣ ಸಂಸ್ಥೆಗಳ ಸಮೂಹವಾಗಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂಬ ಸಂಸ್ಥಾಪಕರ ಕನಸನ್ನು ಇಂದು ಡಾ. ಸುಶ್ರುತ ಗೌಡ ಮತ್ತಷ್ಟು ವಿಸ್ತರಿಸುತ್ತಿದ್ದಾರೆ.
ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದರು. ನಂತರ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ತರಬೇತಿ ಹಾಗೂ ಇಂಗ್ಲೆಂಡ್‌ನಲ್ಲಿ ಉನ್ನತ ವೈದ್ಯಕೀಯ ತರಬೇತಿ ಪಡೆದರು.
ಬಳಿಕ ಅಮೆರಿಕದ ಯೂನಿವರ್ಸಿಟಿ ಆಫ್ ಫ್ಲೋರಿಡಾದಲ್ಲಿ ನ್ಯೂರಾಲಜಿ ರೆಸಿಡೆನ್ಸಿ ಮತ್ತು ಸ್ಟ್ರೋಕ್ ಫೆಲೋಷಿಪ್ ಪೂರ್ಣಗೊಳಿಸಿ ಅಮೆರಿಕನ್ ಬೋರ್ಡ್ ಪ್ರಮಾಣಿತ ನ್ಯೂರಾಲಜಿಸ್ಟ್ ಹಾಗೂ ವ್ಯಾಸ್ಕುಲರ್ ನ್ಯೂರಾಲಜಿ ತಜ್ಞರಾಗಿ ಗುರುತಿಸಿಕೊಂಡರು. ಯೂನಿವರ್ಸಿಟಿ ಆಫ್ ನ್ಯೂ ಮೆಕ್ಸಿಕೊದಲ್ಲಿ ಸ್ಟ್ರೋಕ್ ನಿರ್ದೇಶಕರಾಗಿ, ಯೂನಿವರ್ಸಿಟಿ ಆಫ್ ಫ್ಲೋರಿಡಾದಲ್ಲಿ ಸಹ ಪ್ರಾಧ್ಯಾಪಕರಾಗಿ ಹಾಗೂ ಇಂಡಿಯಾನಾದ ಬ್ಯಾಪ್ಟಿಸ್ಟ್ ಹೆಲ್ತ್ ಫ್ಲಾಯ್ಡಾ ಆಸ್ಪತ್ರೆಯಲ್ಲಿ ಸ್ಟ್ರೋಕ್ ಮೆಡಿಕಲ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದರು.
ಅಮೆರಿಕದಲ್ಲಿದ್ದ ವೇಳೆ ಸ್ಟ್ರೋಕ್, ಮಿದುಳಿನ ಊತ, ನ್ಯೂರೋ-ಇನ್‌ಫ್ಲಮೇಶನ್ ಸೇರಿದಂತೆ ಹಲವು ವಿಷಯಗಳ ಕುರಿತು ಸಂಶೋಧನೆ ನಡೆಸಿದ್ದು, ಅನೇಕ ಅಂತಾರಾಷ್ಟ್ರೀಯ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಪ್ರಮುಖ ಸಂಶೋಧಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ಸಂಶೋಧನಾ ಲೇಖನಗಳು ಜಾಗತಿಕ ವೈದ್ಯಕೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿದ್ದು, ವೈದ್ಯಕೀಯ ಪಠ್ಯಪುಸ್ತಕಗಳಿಗೂ ಅಧ್ಯಾಯಗಳನ್ನು ಬರೆದಿದ್ದಾರೆ.
ವಿದೇಶದಲ್ಲಿ ಯಶಸ್ವಿ ವೃತ್ತಿಜೀವನವನ್ನು ಬಿಟ್ಟು ಮೈಸೂರಿಗೆ ಮರಳಿರುವ ಡಾ.ಸುಶ್ರುತ ಗೌಡ, ಪ್ರಸ್ತುತ ನ್ಯೂರೋಝೋನ್‌ಬ್ರೈನ್ ಅಂಡ್ ಸ್ಟೈನ್ ಕೇರ್ ಸಂಸ್ಥೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಟ್ರೋಕ್, ಎಪಿಲೆಪ್ಸಿ, ಡಿಮೆನ್ಷಿಯಾ, ನರ ಸಂಬಂಧಿತ ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಒದಗಿಸುವತ್ತ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ವೇಳೆ ವಿಷ್ಣುಮೂರ್ತಿರೇಖಾಮೂರ್ತಿ ಟ್ರಸ್ಟ್ ಮೂಲಕ ಗ್ರಾಮೀಣ ಆರೋಗ್ಯ ಸೇವೆಗೆ ಹೆಚ್ಚಿನ ಒತ್ತು ನೀಡಿದ್ದು, 500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ, ನರವೈದ್ಯಕೀಯ ಸಲಹೆ, ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ, ಪಾರ್ಶ್ವವಾಯು ಜಾಗೃತಿ ಮತ್ತು ಟೆಲಿಮೆಡಿಸಿನ್ ಸೇವೆ ಒದಗಿಸಿದ್ದಾರೆ.
ಕರೊನಾ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರಕ, ಬೈಪ್ಯಾಪ್ ಯಂತ್ರ, ಆಮ್ಲಜನಕ ಸಿಲಿಂಡರ್ ಹಾಗೂ ಪಿಪಿಇ ಕಿಟ್‌ಗಳನ್ನು ಪೂರೈಸುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದರು. ದೂರದ ಪ್ರದೇಶಗಳ ರೋಗಿಗಳಿಗೆ ಟೆಲಿಮೆಡಿಸಿನ್ ಮೂಲಕ ತಜ್ಞರ ಸಲಹೆ ತಲುಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.
ವೈದ್ಯಕೀಯ ಮತ್ತು ಸಮಾಜಸೇವೆಯಲ್ಲಿನ ಕೊಡುಗೆಗಾಗಿ ಸೇವಾರತ್ನ, ಎಮರ್ಜಿಂಗ್ ಲೀಡರ್, ನೇಗಿಲಯೋಗಿ ಹಾಗೂ ಆದಿಚುಂಚನಗಿರಿ ಮಾತಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.
ಆರೋಗ್ಯ ಸೇವೆ ವ್ಯಕ್ತಿಯ ವಿಳಾಸವನ್ನು ಅವಲಂಬಿಸಬಾರದು. ನಗರ ಮತ್ತು ಗ್ರಾಮ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಜಾಗತಿಕ ಮಟ್ಟದ ಆರೋಗ್ಯ ಸೇವೆಯನ್ನು ಗ್ರಾಮೀಣ ಭಾರತದ ಬಾಗಿಲಿಗೆ ತಲುಪಿಸುವುದೇ ನನ್ನ ಗುರಿ ಎಂದು ಡಾ.ಸುಶ್ರುತ ಗೌಡ ತಿಳಿಸಿದ್ದಾರೆ.
ವೈಜ್ಞಾನಿಕ ಸಂಶೋಧನೆ, ವೈದ್ಯಕೀಯ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಒಂದೇ ಪಥದಲ್ಲಿ ಸಾಗಿಸಿರುವ ಡಾ.ಸುಶ್ರುತ ಗೌಡ ಅವರ ಬದುಕಿನ ಪಯಣ, ಮೈಸೂರಿನಿಂದ ವಿಶ್ವಕ್ಕೆ, ವಿಶ್ವದಿಂದ ಮತ್ತೆ ಸಮಾಜದ ಸೇವೆಗೆ ಎಂಬ ಸ್ಫೂರ್ತಿದಾಯಕ ಕಥೆಯಾಗಿದೆ. ಇದು ವೈದ್ಯಕೀಯ ಕ್ಷೇತ್ರದ ಸಾಧನೆಯಷ್ಟೇ ಅಲ್ಲ, ಸಮಾಜದ ಮೇಲಿನ ಬದ್ಧತೆಯ ಪ್ರತೀಕವೂ ಹೌದು.