ಡಾ.ರಾಜ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಗೆ ಡಾ.ರಾಜ್ ಪ್ರತಿಭಾ ಪುರಸ್ಕಾರ ನೀಡಲಾಯಿತು.ಡಾ.ವಸಂತಕುಮಾರ್ ತಿಮಕಾಪುರ, ಶ್ರೀ ಇಳೈ ಆಳ್ವಾರ್ ಸ್ವಾಮಿ, ಮಡ್ಡಿಕೆರೆ ಗೋಪಾಲ್, ಡಾ.ನಾಗರಾಜ್ ವಿ.ಭೈರಿ, ಡಾ.ರಘುರಾಮ್ ವಾಜಪೇಯಿ, ಡಾ.ರಾಜಶೇಖರ್ ಕದಂಬ ಇನ್ನಿತರರಿದ್ದರು. 
ಮೈಸೂರು

ಡಾ. ರಾಜ್ ಸಿನಿಮಾಗಳಿಂದ ಸಮಾಜಕ್ಕೆ ಉತ್ತಮ ಸಂದೇಶ

ಪ್ರಮುಖ ಮುಖ್ಯಾಂಶಗಳು

  • ಡಾ.ವಸಂತಕುಮಾರ್ ತಿಮಕಾಪುರ ಅಭಿಪ್ರಾಯ
  • ಡಾ.ರಾಜ್ ಜನ್ಮದಿನೋತ್ಸವ, ಡಾ.ರಾಜ್ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
 ಮೈಸೂರು: ವರನಟ ಡಾ.ರಾಜ್‌ಕುಮಾರ್ ಅವರ ಚಲನಚಿತ್ರಗಳು ಕೇವಲ ಮನರಂಜನೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಹಾಗೂ ಕನ್ನಡಿಗೆ ಸಂಸ್ಕೃತಿ, ಬದುಕಿನ ನೈತಿಕತೆಯ ಸಂದೇಶ ಸಾರುವ ಸಿನಿಮಾಗಳಾಗಿದ್ದವು ಎಂದು ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಹೇಳಿದರು.
ಇಂಚರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ  ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ರಾಜ್ ಜನ್ಮದಿನೋತ್ಸವ, ಡಾ.ರಾಜ್ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ ಅಭಿನಯಿಸಿದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಕೌಟುಂಬಿಕ ಚಿತ್ರಗಳಲ್ಲಿ ಸಮಾಜದ ಉತ್ತಮ ಸಂದೇಶವನ್ನೇ ನೀಡಿದ್ದಾರೆ. ಎಲ್ಲ ಬಗೆಯ ಚಲನಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರದಲ್ಲಿ ನಟಿಸಿದ ಏಕೈಕ ನಟ ಎನಿಸಿದ್ದಾರೆ. ಅವರು ಕಲಾತಪಸ್ವಿ ಎಂದು ಹೇಳಿದರು.
ಅವರ ‘ಬಂಗಾರದ ಮನುಷ್ಯ ಚಲನಚಿತ್ರ ಅನೇಕರ ಮೇಲೆ ಪರಿಣಾಮ ಬೀರಿ ಕೃಷಿ ಚಟುವಟಿಕೆಯತ್ತ ಮುಖಮಾಡುವಂತೆ ಮಾಡಿತ್ತು. ಅವರು  ಕೇವಲ ವ್ಯಕ್ತಿಯಾಗಿರಲಿಲ್ಲ, ಅವರೊಂದು ಶಕ್ತಿ, ಧ್ರುವತಾರೆ, ಸಾಂಸ್ಕೃತಿಕ ಶಕ್ತಿ, ಬದುಕಿನ ಆದರ್ಶವಾಗಿದ್ದರು ಎಂದರು.
ಕಲೆಗೆ ಸಮರ್ಪಣೆ ಮಾಡಿಕೊಂಡಿದ್ದ ಅವರು ಅಭಿನಯಿಸುವಾಗ ಆಯಾ ಪಾತ್ರದಲ್ಲಿ ತಲ್ಲೀನರಾಗಿರುತ್ತಿದ್ದರು. ಪ್ರತಿಯೊಂದು ಚಲನಚಿತ್ರದಲ್ಲೂ ಯುವಕರಿಗೆ ಮಾದರಿಯಾಗಿದ್ದರು. ಯಾವ ಚಿತ್ರದಲ್ಲೂ ಧೂಮಪಾನ, ಮದ್ಯಪಾನ ಮಾಡಲಿಲ್ಲ. ಇದರಿಂದ ಯುವ ಜನರು ದುಶ್ಚಟದಿಂದ ದೂರ ಇರುವಂತೆ ಸಂದೇಶ ಸಾರಿದ ನಟರಾಗಿದ್ದಾರೆ ಎಂದು ತಿಳಿಸಿದರು.
ಹವ್ಯಾಸಿ ರಂಗಭೂಮಿ ಕಲಾವಿದ ಸ್ವಾಮಿ ಮಹಾಮನೆ,  ಪತ್ರಿಕಾ ಛಾಯಾಗ್ರಾಹಕ ಎಂ.ಎನ್.ಲಕ್ಷ್ಮೀ ನಾರಾಯಣ ಯಾದವ್, ಗಾಯಕ ರಾ.ಬಿ.ನಾಗರಾಜ್, ಸಮಾಜ ಸೇವಕ ಎಸ್.ವೆಂಕಟೇಶ್, ರೈತ ಜಯರಾಮ್, ಸಮಾಜ ಸೇವಕ ಆರ್.ಲಕ್ಷ್ಮಣ್, ಯೋಗ ಕ್ಷೇತ್ರದಿಂದ ಅನಂತ್ ಅವರಿಗೆ ಡಾ.ರಾಜ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿ ಎಂ.ಪಿ.ನಿಧಿಶ್ರೀ ಅವರಿಗೆ ಡಾ.ರಾಜ್ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. 
ಶ್ರೀ ಇಳೈ ಆಳ್ವಾರ್ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ.ಭೈರಿ, ಸಮಾಜಸೇವಕ ಡಾ.ರಘುರಾಮ್ ವಾಜಪೇಯಿ, ರಂಗಕರ್ಮಿ ಡಾ.ರಾಜಶೇಖರ್ ಕದಂಬ, ಲೇಖಕ ಡಾ.ಸತೀಶ್ ಚಂದ್ರ, ಉಪನ್ಯಾಸಕಿ ನಿವೇದಿತಾ,  ಪ್ರತಿಷ್ಠಾನದ ಅಧ್ಯಕ್ಷ ರಂಗನಾಥ್ ಮೈಸೂರು ಇನ್ನಿತರರಿದ್ದರು.