ನಗರದ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭೈರವಿ ಗೌಡತಿಯರ ಬಳಗದ ವತಿಯಿಂದ ಆಯೋಜಿಸಿದ್ದ ಕನ್ನಡ ಹಬ್ಬ ಹಾಗೂ ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ಕೆ.ಬಿ.ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು. ರಾಧಾ ಲಂಕೇಗೌಡ, ರೇವತಿ ಕೃಷ್ಣಪ್ಪ, ಕೋಮಲ ವೆಂಕಟೇಶ್, ಡಾ.ಹೇಮಾ ನಂದೀಶ್, ವಿಕ್ರಂ ಅಯ್ಯಂಗಾರ್ ಇದ್ದರು. 
ಮೈಸೂರು

ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡಿಸಿ: ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಸಲಹೆ

ಕನ್ನಡ ಹಬ್ಬ ಹಾಗೂ ದೀಪಾವಳಿ ಸಂಭ್ರಮ

ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು. ಕನ್ನಡದ ಮೇಲಿನ ಅಭಿಮಾನ ಕೇವಲ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸೀಮಿತವಾಗದೆ, ದೈನಂದಿನ ಬದುಕಿನಲ್ಲೂ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಹೇಳಿದರು.

ನಗರದ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭೈರವಿ ಗೌಡತಿಯರ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ಹಬ್ಬ ಹಾಗೂ ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡ ಭಾಷೆ ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಕನ್ನಡದ ಇತಿಹಾಸ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಮನೆಗಳಲ್ಲಿ ಕನ್ನಡ ಮಾತನಾಡುವುದರ ಜತೆಗೆ, ಕನ್ನಡ ಸಾಹಿತ್ಯ ಓದುವ ಮತ್ತು ಕನ್ನಡ ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡಪರ ಸಂಘಟನೆಗಳು ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ನಡೆಸುತ್ತಿರುವ ಕಾರ್ಯಗಳು ಶ್ಲಾಘನೀಯ. ಇಂತಹ ಸಂಘಟನೆಗಳು ಕನ್ನಡದ ಅಭಿಮಾನವನ್ನು ಜನರಲ್ಲಿ ಜಾಗೃತಗೊಳಿಸುವುದರ ಜತೆಗೆ ಸಮಾಜದಲ್ಲಿ ಸಾಂಸ್ಕೃತಿಕ ಒಗ್ಗಟ್ಟನ್ನು ಮೂಡಿಸುತ್ತಿವೆ. ಮಹಿಳೆಯರು ಸಂಘಟಿತರಾಗಿ ಕನ್ನಡ ಹಬ್ಬ ಹಾಗೂ ದೀಪಾವಳಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮಹಿಳೆಯರ ಸಂಘಟನಾ ಶಕ್ತಿ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ದೀಪಾವಳಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂಕೇತವಾದರೆ, ಕನ್ನಡ ರಾಜ್ಯೋತ್ಸವ ನಮ್ಮ ಭಾಷೆ, ನೆಲ ಮತ್ತು ನಾಡಿನ ಅಸ್ಮಿತೆಯನ್ನು ನೆನಪಿಸುವ ಹಬ್ಬವಾಗಿದೆ. ಕನ್ನಡದ ಕಂಪು ಎಲ್ಲೆಡೆ ಪಸರಿಸುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಡಾ.ಕೆ.ಬಿ.ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು.

ಬಳಗದ ಗೌರವಾಧ್ಯಕ್ಷೆ ರಾಧಾ ಲಂಕೇಗೌಡ, ಅಧ್ಯಕ್ಷೆ ರೇವತಿ ಕೃಷ್ಣಪ್ಪ, ಪದಾಧಿಕಾರಿಗಳಾದ ಕೋಮಲಾ ವೆಂಕಟೇಶ್, ಡಾ.ಹೇಮಾ ನಂದೀಶ್, ವಿಕ್ರಂ ಅಯ್ಯಂಗಾರ್ ಸೇರಿದಂತೆ ಬಳಗದ ಸದಸ್ಯರು ಉಪಸ್ಥಿತರಿದ್ದರು.