ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ಡಾ. ಕೆ.ಬಿ. ಲಿಂಗರಾಜು ಮನವಿ ಸಲ್ಲಿಸಿದರು. ಕೆ.ರವೀಂದ್ರ ಪ್ರಭು ಇದ್ದರು. 
ಮೈಸೂರು

ಸಾಮರ್ಥ್ಯ ವೃದ್ಧಿ ವೆಚ್ಚ ಪ್ರಸ್ತಾವನೆ ಕೈಬಿಡಿ: ಡಾ.ಕೆ.ಬಿ.ಲಿಂಗರಾಜು

ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಆಗ್ರಹ ಹೊಸ ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಕಾಲಮಿತಿ ನಿಗದಿಪಡಿಸಿ

ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಸಾಮರ್ಥ್ಯ ವೃದ್ಧಿ ವೆಚ್ಚ ವಿಧಿಸುವ ಪ್ರಸ್ತಾವನೆ ಕೈಬಿಡಬೇಕು. ಹೊಸ ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಕಾಲಮಿತಿ ನಿಗದಿಪಡಿಸಿ, ಕಾರ್ಯಸಾಧ್ಯತಾ ವರದಿ ನೀಡುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಆಗ್ರಹಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ಡಾ.ಕೆ.ಬಿ.ಲಿಂಗರಾಜು ಆಯೋಗ ರೂಪಿಸಿರುವ ವಿದ್ಯುತ್ ಸರಬರಾಜು ನಿಯಮಾವಳಿ-2026ರ ಕರಡು ಪ್ರಸ್ತಾವನೆಗಳಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಹಕರು ನೇರವಾಗಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಸ್ವಾಗತಿಸಿದ ಉದ್ಯಮ ಪ್ರತಿನಿಧಿಗಳು, ಕೈಗಾರಿಕೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಪ್ರಸ್ತಾವನೆಗಳಿಗೆ ವಿರೋಧ ವ್ಯಕ್ತಪಡಿಸಿದರು. ವಿದ್ಯುತ್ ಸಂಪರ್ಕಕ್ಕಾಗಿ ಸಾಮರ್ಥ್ಯ ವೃದ್ಧಿ ವೆಚ್ಚವನ್ನು ಕೈಗಾರಿಕೆಗಳಿಂದಲೇ ಭರಿಸುವಂತೆ ಮಾಡುವುದರಿಂದ ಉದ್ಯಮಗಳಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ವಿದ್ಯುತ್ ಉಪಕೇಂದ್ರಗಳ ನಿರ್ಮಾಣಕ್ಕೆ ಎರಡು ವರ್ಷಗಳ ಕಾಲಮಿತಿ ನಿಗದಿಪಡಿಸುವುದು, ಕಾರ್ಯಸಾಧ್ಯತಾ ವರದಿ ಒದಗಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ವಿದ್ಯುತ್ ಸಂಬಂಧಿತ ವಿವಾದಗಳನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳನ್ನು ಆಯೋಗದ ಗಮನಕ್ಕೆ ತಂದರು.

ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಾದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ರೂಪಿಸುವ ಜತೆಗೆ, ಉದ್ಯಮಿಗಳಿಗೆ ಅನಗತ್ಯ ಆರ್ಥಿಕ ಹೊರೆ ಉಂಟಾಗದಂತೆ ಕರಡು ನಿಯಮಾವಳಿಯಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ಮರುಪರಿಶೀಲಿಸಬೇಕು. ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ತಯಾರಕರ ಸಂಘ ಕೆ. ರವೀಂದ್ರ ಪ್ರಭು ಇದ್ದರು.