ಡಾ.ಎಚ್.ಎಂ.ಶಶಿರೇಖಾ ಅವರಿಗೆ ‘ಧನ್ವಂತರಿ ವೈದ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಜಿ.ಟಿ.ದೇವೇಗೌಡ, ಡಾ. ಪಿ.ಎನ್.ಗಣೇಶ್ ಕುಮಾರ್, ಅನುಪಮಾ ಪಂಡಿತ್, ಮೋಹನ್, ಎಂ.ಎಸ್. ಕುಮಾರ್, ದೇವಪ್ಪ ಇದ್ದರು.
- ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಅಮೆಚೂರ್ ಯೋಗ ಕ್ರೀಡಾ ಮಹಾ ಸಂಘದ ವತಿಯಿಂದ ಪ್ರಶಸ್ತಿ ಪ್ರದಾನ
- ಶಾಸಕ ಜಿ.ಟಿ.ದೇವೇಗೌಡ ಭಾಗಿ
- ಗುರು ವಂದನಾ ಸಂಭ್ರಮಾಚರಣೆ ಕಾರ್ಯಕ್ರಮ
ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಅಮೆಚೂರ್ ಯೋಗ ಕ್ರೀಡಾ ಮಹಾ ಸಂಘದ ವತಿಯಿಂದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆರ್‌ಎಂಒ ಡಾ.ಎಚ್.ಎಂ.ಶಶಿರೇಖಾ ಅವರಿಗೆ ‘ಧನ್ವಂತರಿ ವೈದ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗುರು ವಂದನಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬಳಕ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ತಮ್ಮ ಜ್ಞಾನ ಹಾಗೂ ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಸೇವೆ ಸಲ್ಲಿಸುತ್ತಿರುವ ಡಾ.ಶಶಿರೇಖಾ ಅವರ ಕಾರ್ಯ ಶ್ಲಾಘನೀಯ. ಅವರು ಆಯುರ್ವೇದ ಕ್ಷೇತ್ರದಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯದ ನಂತರವೂ ತಮ್ಮ ಸುತ್ತಮುತ್ತಲಿನ ಸಸ್ಯ, ಹಸಿರೆಲೆ ಹಾಗೂ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಅಗತ್ಯವಿರುವ ರೋಗಿಗಳಿಗೆ ಔಷಧಿ ತಯಾರಿಸಿ ನೀಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವಾ ಮನೋಭಾವ ಮುಂದುವರಿಯಲಿ ಎಂದು ಅವರು ಆಶಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಸಂತಸ ತಂದಿದೆ. ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇಂತಹ ಸನ್ಮಾನಗಳು ಸಾಧಕರಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಶಕ್ತಿ ನೀಡಲಿದ್ದು, ಅವರು ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರಣೆಯಾಗಲಿವೆ. ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಇದೇ ವೇಳೆ ಡಾ.ಕುಕ್ಕೆ ಸುಬ್ರಹ್ಮಣ್ಯ ಅವರಿಗೆ ಸುಶ್ರುತ ವೈದ್ಯ ರತ್ನ ಪ್ರಶಸ್ತಿ, ಹಿರಿಯ ಪತ್ರಕರ್ತ ಎಂ.ಆರ್.ಸತ್ಯನಾರಾಯಣ ಅವರಿಗೆ ದುಂದುಭಿ ಮಾಧ್ಯಮ ರತ್ನ ಪ್ರಶಸ್ತಿ ಹಾಗೂ ಎಸ್‌ಪಿವೈಎಸ್‌ಎಸ್ ಸಂಸ್ಥೆಗೆ ರಾಜಯೋಗಿ ಟಿ.ಕೃಷ್ಣಮಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಎಸ್‌ಎಸ್‌ಎಸ್ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಅನುಪಮಾ ಪಂಡಿತ್, ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಗಜಾನನ ಹೆಗ್ಡೆ, ಕೇಸರೆ ರಾಘವೇಂದ್ರ ಸ್ವಾಮಿ ಮಠದ ಅರವಿಂದ ಆಚಾರ್ಯ, ನಿವೃತ್ತ ಡಿವೈಎಸ್ಪಿ ಉಮೇಶ್ ಗಣಪತಿ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಮೋಹನ್, ಮಂಡ್ಯದ ಸಹಾಯಕ ಜೈಲರ್ ಎಂ.ಎಸ್. ಕುಮಾರ್, ಎಂ.ವಿ.ಯೋಗಾಸ್‌ನ ಉಪಾಧ್ಯಕ್ಷ ದೇವಪ್ಪ, ಎಚ್.ಡಿ.ಭಾಸ್ಕರ್, ಯೋಗಾಚಾರ್ಯ ಡಾ. ಪಿ.ಎನ್.ಗಣೇಶ್ ಕುಮಾರ್ ಭಾಗವಹಿಸಿದ್ದರು.