ಖಿಲ್ಲೆ ಮೊಹಲ್ಲಾದ ಅರಮನೆ ಜಪದಕಟ್ಟೆ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು-ಬರಹ-ವಿಚಾರಧಾರೆ’ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಂಕರ ದೇವನೂರು, ಬಿ.ರಂಗೇಗೌಡ, ಬಿ.ಗೋವಿಂದ ಇನ್ನಿತರರಿದ್ದರು.
- ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಬರಹ-ವಿಚಾರಧಾರೆ ಉಪನ್ಯಾಸ ಕಾರ್ಯಕ್ರಮ
- ಅಂಬೇಡ್ಕರ್ ಅವರು ಎಲ್ಲ ವರ್ಗದವರ ಹಿತಕ್ಕಾಗಿ ಸಂವಿಧಾನ ನೀಡಿದ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಹೂವು.
- ಆಧುನಿಕ ಕಾಲದಲ್ಲೂ ಸಂಕುಚಿತ ಮನೋಭಾವದ ಕಾರಣದಿಂದಾಗಿಯೇ ಅಸಮಾನತೆ, ತಾರತಮ್ಯ ಮುಂದುವರಿಕೆ
ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರಂಥವರು ನೀಡಿದ ಬೆಳಕಿನಲ್ಲೇ ಸಮಾಜ ಈಗಲೂ ಸಾಗುತ್ತಿದೆ, ಅಂತಹ ಜೀವನ ನಮ್ಮದಾಗಬೇಕು ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಗರದ ಖಿಲ್ಲೆ ಮೊಹಲ್ಲಾದ ಅರಮನೆ ಜಪದಕಟ್ಟೆ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಬರಹ-ವಿಚಾರಧಾರೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸೆಯನ್ನು ದಾಸರಾಗಿಸಿಕೊಂಡು ಜೀವನ ನಡೆಸಿದವರಿಗೆ ಇಡೀ ಲೋಕವೇ ದಾಸನಾಗುತ್ತದೆ. ಬಂದು ಹೋಗುವ ನಡುವಿನ ಬದುಕು ಜೀವಪರವಾಗಿರಬೇಕು. ಇತರರಿಗೆ ಬದುಕುವವರು ಸತ್ತ ಮೇಲೂ ಜೀವಂತವಾಗಿ ಇರುತ್ತಾರೆ. ಹೀಗೆ ಬದುಕಿದವರು ಅಂಬೇಡ್ಕರ್. ಎಲ್ಲ ವರ್ಗದವರ ಹಿತಕ್ಕಾಗಿ ಸಂವಿಧಾನ ನೀಡಿದ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಹೂವು. ನೋವು, ಅಪಮಾನವನ್ನು ಸಹಿಸಿಕೊಂಡು ಜಗತ್ತಿಗೆ ಬೆಳಕು ನೀಡಿದವರು. ಅವರು ಇಡೀ ಜಗತ್ತಿನ ಆಸ್ತಿ ಎಂದರು.
ಆಧುನಿಕ ಕಾಲದಲ್ಲೂ ಸಂಕುಚಿತ ಮನೋಭಾವದ ಕಾರಣದಿಂದಾಗಿಯೇ ಅಸಮಾನತೆ, ತಾರತಮ್ಯ ಮುಂದುವರಿದಿದ್ದು, ಇದನ್ನು ಅನುಭವಿಸಿದ್ದ ಅಂಬೇಡ್ಕರ್ ಅವರು ಶೋಷಿತರನ್ನು ಕೇಂದ್ರವಾಗಿ ಇಟ್ಟುಕೊಂಡು ಕೆಲಸ ಮಾಡಿದರು. ಅವರು ಜ್ಞಾನದ ಸಂಕೇತ. ಎಚ್ಚರಿಕೆ ಪ್ರಜ್ಞೆಯ ಪ್ರತೀಕ ಎಂದು ವಿಶ್ಲೇಷಿಸಿದರು.
ಅರಮನೆ ಜಪದಕಟ್ಟದ ಮಠದ ಪೀಠಾಧ್ಯಕ್ಷ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಪ್ರಸಾರಾಂಗದ ಉಪ ನಿರ್ದೇಶಕ ಬಿ.ಗೋವಿಂದ, ಶಂಕರವಿಲಾಸ ಸಂಸ್ಕೃತ ಪಾಠಶಾಲಾ ಸಮಿತಿಯ ಕಾರ್ಯದರ್ಶಿ ಎಸ್.ಜ್ಞಾನಶಂಕರ್, ಶಂಕರವಿಲಾಸ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕಿ ಎಲ್.ಪಂಕಜಾಕ್ಷಿ ಪಾಲ್ಗೊಂಡಿದ್ದರು.