ಡಾ.ಬಿ.ಆರ್. ಅಂಬೇಡ್ಕರ್  
ಮೈಸೂರು

ಪುಸ್ತಕಗಳಿಗೆ ಮನೆಕಟ್ಟಿದ ಮಹಾಪುರುಷ ಡಾ,ಬಿ.ಆರ್.ಅಂಬೇಡ್ಕರ್ : ಡಾ.ಜೆ.ಸೋಮಶೇಖರ್ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಬಾಲ್ಯದಲ್ಲೇ ಓದುವುದನ್ನು ಸವಾಲಾಗಿ ಸ್ವೀಕರಿಸಿದ್ದ ಅಂಬೇಡ್ಕರ್
  • ಪುಸ್ತಕಗಳಿಗಾಗಿಯೇ ಮನೆಯನ್ನು ಕಟ್ಟಿಸಿದ ಮಹಾಪುರುಷ ಡಾ.ಬಿ.ಆರ್.ಅಂಬೇಡ್ಕರ್
  • ಅಂಬೇಡ್ಕರ್ ಅವರಿಗೆ ಎಷ್ಟೇ ಆರ್ಥಿಕ ಮುಗ್ಗಟ್ಟುಗಳಿದ್ದರೂ ಪುಸ್ತಕ ಕೊಳ್ಳುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ
ಮೈಸೂರು: ಸಮಾಜವನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅಪಾರ ಎಂದು ಮೈಸೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಬಣ್ಣಿಸಿದರು.
ಮೈಸೂರು ವಿವಿ ಗ್ರಂಥಾಲಯದ ಡಾ.ಎಸ್.ಆರ್.ರಂಗನಾಥನ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ವಿಜ್ಞಾನ ಅಧ್ಯಯನ ವಿಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪುಸ್ತಕ ವಿಷಯ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಳವರು ತಮ್ಮ ವಾಸಕ್ಕಾಗಿ ದೊಡ್ಡ ಬಂಗಲೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ ಪುಸ್ತಕಗಳಿಗಾಗಿಯೇ ಮನೆಯನ್ನು ಕಟ್ಟಿಸಿದ ಮಹಾಪುರುಷ ಡಾ.ಬಿ.ಆರ್.ಅಂಬೇಡ್ಕರ್, ಸಮಾಜವನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವಲ್ಲಿ  ಅವರ ಶ್ರಮ ಅಪಾರ ಎಂದರು.
ಬಾಲ್ಯದಲ್ಲೇ ಓದುವುದನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಅಂಬೇಡ್ಕರ್ ಅವರು ಜ್ಞಾನಿಯಾದರು. ಹೆಚ್ಚು ಗ್ರಂಥಾಲಯ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ಅಂಬೇಡ್ಕರ್ ಮುಂದಾಗಿದ್ದು, ಅದಕ್ಕೆ ಅವರ ತಂದೆಯ ಸಹಕಾರವೇ ಕಾರಣವಾಗಿತ್ತು ಎಂದು ಹೇಳಿದರು.
ಪುಸ್ತಕಗಳ ಮೇಲೆ ಬಾಬಾ ಸಾಹೇಬರಿಗೆ ಎಷ್ಟರ ಮಟ್ಟಿಗೆ ಒಲವಿತ್ತು ಎಂದರೆ ತಮಗೆ ಪುಸ್ತಕಗಳಿಂದ ಬರುತ್ತಿದ್ದ ಗೌರವಧನವನ್ನು ನಗದಾಗಿ ಪಡೆಯುವ ಬದಲಿಗೆ ಅಗತ್ಯವಿರುವ ಪುಸ್ತಕಗಳನ್ನಾಗಿ ಪಡೆಯುತ್ತಿದ್ದರು. ಹಲವು ಬಾರಿ ಗೌರವಧನಕ್ಕಿಂತ ಪುಸ್ತಕಗಳನ್ನು ಪಡೆದ ಬೆಲೆಯೇ ಹೆಚ್ಚಾಗಿರುತ್ತಿತ್ತು ಎಂದು ಹೇಳಿದರು.
ಅಂಬೇಡ್ಕರ್ ಅವರಿಗೆ ಎಷ್ಟೇ ಆರ್ಥಿಕ ಮುಗ್ಗಟ್ಟುಗಳಿದ್ದರೂ ಪುಸ್ತಕ ಕೊಳ್ಳುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರೀದಿಸಿದ್ದರು ಎಂಬುದು ಅಂದಿನ ಕಾಲಕ್ಕೆ ದೊಡ್ಡ ವಿಷಯ. ಭಾರತದಲ್ಲಿಯೇ ಬಾಬಾ ಸಾಹೇಬರ ಪುಸ್ತಕ ಸಂಗ್ರಹಣೆ ಅತ್ಯಂತ ದೊಡ್ಡದು ಎನ್ನಬಹುದು. ನಾನು ಮಲಗುವ ಕೋಣೆಯೇ ನನ್ನ ಸಮಾಜ ಎಂದು ಹೇಳಿದ್ದ ಬಾಬಾ ಸಾಹೇಬರು, ನನ್ನ ಬಳಿ ಸಂಪತ್ತು ಎಂದು ಏನಾದರೂ ಇದ್ದರೆ ಅದು ಪುಸ್ತಕಗಳು ಮಾತ್ರ ಎಂದು ಹೇಳುತ್ತಿದ್ದರು ಎಂದರು.
ಮೈಸೂರು ವಿವಿ ಗ್ರಂಥಪಾಲಕರಾದ ಡಾ.ಪಿ. ಸರಸ್ವತಿ ಮಾತನಾಡಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎನ್.ಆರ್.ಹರಿ ನಾರಾಯಣ ಇದ್ದರು.