ಸಾಲಿಗ್ರಾಮ ತಾಲೂಕಿನ ಉದಯಗಿರಿ ಗ್ರಾಮದಲ್ಲಿ ನೂತನ ಡಾ.ಅಂಬೇಡ್ಕರ್ ನಾಮಫಲಕವನ್ನು ಶಾಸಕ ಡಿ.ರವಿಶಂಕರ್ ಅನಾವರಣಗೊಳಿಸಿದರು. ಹೆಬ್ಬಾಳ್ ದಿವಾಕರ್, ರಾಂಪುರ ಲೋಕೇಶ್, ಸಂತೋಷ್, ರಾಮಚಂದ್ರ, ಜವರಯ್ಯ, ರಮೇಶ್, ರವಿ, ಹರೀಶ್ ಇತರರು ಇದ್ದರು.
ಸಾಲಿಗ್ರಾಮ: ಡಾ. ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸುವಂತಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಉದಯಗಿರಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಯುವಕರ ಸಂಘದಿಂದ ಅಳವಡಿಸಿರುವ ನಾಮಫಲಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ನಾನೊಬ್ಬ ಶಾಸಕನಾಗಿ ನಿಂತಿದ್ದೇನೆ ಎಂದರೆ ಅದು ಡಾ.ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಹಾಗಾಗಿ ಸಂವಿಧಾನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ನಮಗೆ ಅಧಿಕಾರ ಇರಲಿ, ಇಲ್ಲದಿರಲಿ ನಿರಂತರವಾಗಿ ಉದಯಗಿರಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಲಿದ್ದೇನೆ. ಗ್ರಾಮದ ಅಭಿವೃದ್ಧಿಗೆ ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡುತ್ತೇನೆ. ಸಂಘದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸೋಣ ಎಂದರು.
ಸಂಘದ ಅಧ್ಯಕ್ಷ ಜವರಪ್ಪ ಅವರು ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕರಿಗೆ ಇದೇ ವೇಳೆ ಮನವಿ ಮಾಡಿದರು. ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಭೇಟಿ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಸಹ ಉದಯಗಿರಿ ಗ್ರಾಮಕ್ಕೆ ಭೇಟಿ ನೀಡಿ ಡಾ. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳ ಜತೆಗೆ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಅಲ್ಲದೆ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಶಾಸಕರು, ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿ ಸಂಘದ ಪದಾಧಿಕಾರಿಗಳಿಗೆ ಅಭಿವೃದ್ಧಿ ಕೆಲಸಗಳ ಪಟ್ಟಿ ಪಡೆದರು.
ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉದಯಗಿರಿ ಗ್ರಾಮದಲ್ಲಿ ಬಹುದಿನಗಳಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ಮಾಡಿಸಲು ಹೆಚ್ಚು ಅನುದಾನವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಡಿಎಸ್‌ಎಸ್ (ಬುದ್ಧವಾದ) ಜಿಲ್ಲಾ ಸಂಚಾಲಕ ಹೆಬ್ಬಾಳ್ ದಿವಾಕರ್, ತಾಲೂಕು ಸಂಚಾಲಕ ರಾಂಪುರ ಲೋಕೇಶ್, ಸಿಡಿಸಿ ಸದಸ್ಯ ಸಂತೋಷ್, ಡಾ.ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ರಾಮಚಂದ್ರ, ಅಧ್ಯಕ್ಷ ಜವರಯ್ಯ, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರವಿ, ಖಜಾಂಚಿ ಹರೀಶ್, ಸಹ ಕಾರ್ಯದರ್ಶಿ ಸಂದೀಪ್, ನಿರ್ದೇಶಕರಾದ ಸ್ವಾಮಯ್ಯ, ರಾಮಯ್ಯ ಇತರರು ಇದ್ದರು.