ಮೈಸೂರು ರಾಜಮನೆತನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇತಿಹಾಸ ಅರಿತು ಮಾತನಾಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಯತೀಂದ್ರ ಅವರಿಗೆ ರಾಜಕೀಯ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಅನುಭವವಿಲ್ಲದವರಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಮೈಸೂರಿನ ಇತಿಹಾಸ ತಿಳಿಯದವರಂತೆ ಮಾತನಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನ ಇತಿಹಾಸ ಹಾಗೂ ರಾಜಮನೆತನದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೆವು. ಅಂದು ಅವರು ಪ್ರಚಾರಕ್ಕೆ ಬಂದಿರದಿದ್ದರೆ ಸಿದ್ದರಾಮಯ್ಯ ಗೆಲುವು ಸಾಧಿಸುವುದು ಕಷ್ಟವಾಗುತ್ತಿತ್ತು. ಮುಂದೆ ಅವರು ಮುಖ್ಯಮಂತ್ರಿಯಾಗುವುದಕ್ಕೂ ಆ ಗೆಲುವು ಮಹತ್ವದ್ದಾಗಿತ್ತು. ಆದರೆ, ಶ್ರೀಕಂಠದತ್ತ ಒಡೆಯರ್ ಅವರ ಬಗ್ಗೆಯೂ ಸಿದ್ದರಾಮಯ್ಯ ಗೌರವಯುತವಾಗಿ ಮಾತನಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಬೆಳವಣಿಗೆಯಿಂದ ರಾಜಮನೆತನಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದರುವುದು ಶ್ಲಾಸಿದರು.
ಬಾಂಬೆ ಡೇಸ್ ಬಿಡುಗಡೆ ಮಾಡಲ್ಲ
ನಾನೇ ಬರೆದಿರುವ ಬಾಂಬೆ ಡೇಸ್ ಪುಸ್ತಕವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿರುವುದಾಗಿ ಎಚ್.ವಿಶ್ವನಾಥ್ ತಿಳಿಸಿದರು.
ಪುಸ್ತಕ ಬಿಡುಗಡೆಯಾದರೆ ರಾಜಕೀಯ ಹಾಗೂ ರಾಜಕಾರಣಿಗಳ ಬಗ್ಗೆ ಜನರಲ್ಲಿ ಮತ್ತಷ್ಟು ಅಸಹ್ಯ ಮೂಡಬಹುದು. ಈಗಾಗಲೇ ಜನರು ರಾಜಕೀಯದ ಬಗ್ಗೆ ಬೇಸರಗೊಂಡಿದ್ದಾರೆ. ಅವರಲ್ಲಿ ಇನ್ನಷ್ಟು ಅಸಹ್ಯ ಹುಟ್ಟಿಸಲು ಇಷ್ಟವಿಲ್ಲ. ಹೀಗಾಗಿ ಪುಸ್ತಕವನ್ನು ಪ್ರಕಟಿಸದಿರಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.
ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಗಳಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು 2028ರಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿರುವುದು ಸರಿಯಲ್ಲ. ಈ ಚುನಾವಣೆಗಳಲ್ಲಿ ಪದವೀಧರರು ಮತ್ತು ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ. ಆದರೂ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 2028ರಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಈ ಫಲಿತಾಂಶವನ್ನೇ ಇಡೀ ರಾಜ್ಯದ ಜನಾಭಿಪ್ರಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿಯೂ ಬಿಜೆಪಿ ಸೋಲನುಭವಿಸಿದ್ದು, ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ ಎಂದರು.