ಹುಣಸೂರು ನಗರದ ಸಂತ ಜೋಸೆಫರ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಉದ್ಘಾಟಿಸಿದರು. ಪ್ರಾಂಶುಪಾಲೆ ಅನಿತಾ ಡಯಾಸ್, ಎಪಿಪಿ ಎಚ್.ಡಿ.ಪಾರ್ವತಿ, ಎಸ್.ಶಿವಣ್ಣೇಗೌಡ, ಎಚ್.ಆರ್.ಕೃಷ್ಣಕುಮಾರ್ ಇದ್ದರು.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಸಲಹೆ
- ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ
ಹುಣಸೂರು: ಎಚ್‌ಐವಿ ಸೋಂಕಿತರನ್ನು ಕೀಳಾಗಿ ಕಂಡು ಮುಖ್ಯವಾಹಿನಿಯಿಂದ ದೂರವಿಡುವಂಥ ಮೂಢನಂಬಿಕೆಗಳನ್ನು ತೊರೆಯಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಸಲಹೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಗರದ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು 1988ರ ಡಿ.1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲು ನಿರ್ಧರಿಸಿತು. ಎಚ್‌ಐವಿ ಸೋಂಕು ರಕ್ತದ ಮೂಲಕ, ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ತಾಯಿಯಿಂದ ಮಗುವಿಗೆ ಸೋಂಕು ತಗುಲುವ ಮೂಲಕ ಹರಡುತ್ತದೆ. ಸಮುದಾಯದಲ್ಲಿ ಎಚ್‌ಐವಿ ಸೋಂಕಿತರನ್ನು ದೂರವಿಡುವ ಪ್ರವೃತ್ತಿ ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಶ್ರದ್ಧೆಯಿಂದ ವ್ಯಾಸಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಬಾರದು. ಎಚ್‌ಐವಿ ಸೋಂಕಿತರನ್ನೂ ಮನುಷ್ಯರೆಂದು ನಡೆಸಿಕೊಳ್ಳಬೇಕು. ಅಗತ್ಯ ಚಿಕಿತ್ಸೆ ನೀಡುವಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ರೋಗದ ಭೀಕರತೆ, ಕಾರಣ ಮುಂತಾದವುಗಳನ್ನು ಅರಿತು ಸಹಜ ಬಾಳ್ವೆ ನಡೆಸಲು ನಿರ್ಧರಿಸಿ ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದರ್ಶನ್ ಮಾತನಾಡಿ, ಈ ವರ್ಷದ ಘೋಷವಾಕ್ಯ ಎಚ್‌ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸಬೇಕು. 2019-20ನೇ ಸಾಲಿನಲ್ಲಿ ಕೋವಿಡ್‌ನಿಂದಾಗಿ ಎಚ್‌ಐವಿ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಮರ್ಪಕವಾಗಿ ದೊರೆಯಲಿಲ್ಲ. ಇದೀಗ ಈ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಸೋಂಕಿತರ ಆರೋಗ್ಯ ವೃದ್ಧಿಗೆ ಇಲಾಖೆ ದೇಶಾದ್ಯಂತ ಶ್ರಮವಹಿಸಿದೆ ಎಂದು ಹೇಳಿದರು.
ಇದ್ದಕ್ಕಿದ್ದಂತೆ ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು, ನಿರಂತರವಾಗಿ ಒಂದು ತಿಂಗಳ ಕಾಲ ಭೇದಿಯಾಗುವುದು, ಸತತ ಜ್ವರ ಇವು ರೋಗದ ಪ್ರಮುಖ ಲಕ್ಷಣಗಳಾಗಿದ್ದು, ನಿರ್ದಿಷ್ಟ ಔಷಧವಿಲ್ಲ, ಜೀವಿತಾವಧಿ ಪೂರ್ಣವಾಗಿ ಚಿಕಿತ್ಸೆ ಪಡೆಯಲೇಬೇಕು. ವಿದ್ಯಾರ್ಥಿಗಳು ಬಹು ಎಚ್ಚರದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ. ಈ ವಯಸ್ಸಿನಲ್ಲಿ ಆಕರ್ಷಣೆ ಸಹಜ. ಆದರೆ ಕ್ಷಣಿಕ ಆಕರ್ಷಣೆಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಏಡ್ಸ್ ಕುರಿತು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಶಶಾಂಕ್ ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲೆ ಅನಿತಾ ಡಯಾಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಶಿವಣ್ಣೇಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಇದ್ದರು.