ಮೈಸೂರಿನ ಕಸಬಾ ಹೋಬಳಿಯ ಕುರುಬರಹಳ್ಳಿಯ ಸರ್ವೇ ಸಂಖ್ಯೆ 4ರಲ್ಲಿ ನಮ್ಮ ಕಾನೂನುಬದ್ಧ ಸ್ವಾಧೀನದಲ್ಲಿರುವ ಸುಮಾರು 14 ಎಕರೆ ಅಳತೆಯ ಭೂಮಿಯನ್ನು ಜಂಟಿ ಉದ್ಯಮಕ್ಕಾಗಿ ನೀಡಲಾಗುತ್ತಿದೆ ಎಂಬ ಸುಳ್ಳು ಸಂದೇಶ ಇರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಆಧಾರ ರಹಿತವಾದ ವದಂತಿ ನಂಬಿ ಸಾರ್ವಜನಿಕರು ವಂಚನೆಗೆ ಬಲಿಯಾಗಬಾರದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಎಚ್ಚರಿಸಿದ್ದಾರೆ.
ಮೈಸೂರಿನ ಕಸಬಾ ಹೋಬಳಿಯ ಕುರುಬರಹಳ್ಳಿಯ ಸರ್ವೇ ಸಂ.4ರ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಇದರಲ್ಲಿ ಆಸ್ತಿಯ ಸ್ವರೂಪ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮಧ್ಯಂತರ ಆದೇಶ ಜಾರಿಯಲ್ಲಿದೆ. ಆದರೂ 14 ಎಕರೆ ಅಳತೆಯ ಭೂಮಿಗೆ ಸಂಬಂಧಿಸಿದ ವಿಡಿಯೋವನ್ನು, ಕೆಲ ದುಷ್ಕರ್ಮಿಗಳು ವಾಟ್ಸ್‌ಆ್ಯಪ್ ಮುಖಾಂತರ ಸಾರ್ವಜನಿಕರಿಗೆ ದಾರಿತಪ್ಪಿಸುವ ಸಲುವಾಗಿ ಹರಿಬಿಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಡಿಯೋದಲ್ಲಿ 20 ಕೋಟಿ ರೂ. ಮರು ಪಾವತಿಸಬಹುದಾದ ಮುಂಗಡದ ಬಗ್ಗೆ ಪ್ರಸ್ತಾಪವಾಗಿದೆ. ಇದು ಸಾರ್ವಜನಿಕರನ್ನು ವಂಚಿಸಲು ಉದ್ದೇಶಪೂರ್ವಕವಾಗಿ ಮಾಡಿದ ಪ್ರಯತ್ನವಾಗಿದೆ. ಈ ಸಂಬಂಧ ಈಗಾಗಲೇ ಸೈಬರ್ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಇಂತಹ ಸುಳ್ಳು ನಿರೂಪಣೆಗಳ ಆಧಾರದ ಮೇಲೆ ವಂಚನೆಗೆ ಬಲಿಯಾಗಬಾರದು ಹಾಗೂ 14 ಎಕರೆ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟಿನಲ್ಲಿ ಭಾಗವಹಿಸಬಾರದು ಎಂದು ತಿಳಿಸಿದ್ದಾರೆ.