ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಶ್ರೀ ದಿಡ್ಡಿಯಮ್ಮ ದೇವಸ್ಥಾನ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಮಾತನಾಡಿದರು. ನಿಸರ್ಗ ಪ್ರಿಯಾ ಜೆ, ಮಹೇಶ್, ಆನಂದ್ ಇದ್ದರು. 
ಮೈಸೂರು

ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಹಾಳು ಮಾಡಿಕೊಳ್ಳಬೇಡಿ

ಪ್ರಮುಖ ಮುಖ್ಯಾಂಶಗಳು

  • ಉಪವಿಭಾಗಾಧಿಕಾರಿ ಕಾವ್ಯರಾಣಿ ಸಲಹೆ
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಶ್ರೀ ದಿಡ್ಡಿಯಮ್ಮ ಅರ್ಚಕರ ಅಮಾನತು ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಶನಿವಾರ ದೇವಸ್ಥಾನ ಆವರಣದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
ಗ್ರಾಮದ ದಿಡ್ಡಿಯಮ್ಮ ದೇಗುಲದ ಅರ್ಚಕರನ್ನು ಅಮಾನತು ಮಾಡಬೇಕು ಹಾಗೂ ಬೇರೆ ಅರ್ಚಕರನ್ನು ನೇಮಕ ಮಾಡಬೇಕು ಎಂದು ತಹಸೀಲ್ದಾರ್ ಮೂಲಕ ಇಲಾಖೆಗೆ ಮನವಿ ಸಲ್ಲಿಸಿದ ಹಾಗೂ ಅರ್ಚಕರ ಕುಟುಂಬದವರು ಗ್ರಾಮದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಶಾಂತಿಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸ್ಥಳೀಯ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರಗಳಿಂದ ಮಾಹಿತಿಗಳೊಂದಿಗೆ ವಾದ-ಪ್ರತಿವಾದವನ್ನು ಉಪ ವಿಭಾಗಾಧಿಕಾರಿಗಳು ಆಲಿಸಿದರು. 
ಕಾವ್ಯರಾಣಿ ಮಾತನಾಡಿ, ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಪರ ಹಾಗೂ ವಿರೋಧವಾಗಿ ದೂರುಗಳು, ಹೇಳಿಕೆಗಳು ಬಂದಿವೆ. ಇದರ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗುವುದು. ಗ್ರಾಮಕ್ಕೆ ಯಾವುದೇ ಇಲಾಖೆಯ ಅಧಿಕಾರಿಗಳು ಬಂದುಹೋದರು ಕಡೆಯಲ್ಲಿ ಉಳಿಯುವುದು ಗ್ರಾಮಸ್ಥರು ಮಾತ್ರ. ಹಾಗಾಗಿ ಎಲ್ಲರು ಒಗ್ಗಟ್ಟಿನಿಂದ ಇರಬೇಕು. ಜತೆಯಲ್ಲಿ ಗ್ರಾಮದಲ್ಲಿ ಯಾರು ಕೂಡ ಶಾಂತಿ, ಸುವ್ಯವಸ್ಥೆ ಹಾಳು ಮಾಡಿಕೊಳ್ಳಬಾರದು ಎಂದರು.
ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಈಗಾಗಲೇ ಇಲ್ಲಿನ ದೇವಸ್ಥಾನದ ಅರ್ಚಕರ ಬದಲಾವಣೆ ಸೇರಿದಂತೆ ಸಮಸ್ಯೆ ಬಗ್ಗೆ ಸ್ಥಳಕ್ಕೆ ಬಂದು ಭೇಟಿ ನೀಡಿ ಮಾಹಿತಿ ಪಡೆಯಲಾಗಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಸಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಎಲ್ಲ ಮಾಹಿತಿ, ಹೇಳಿಕೆಗಳನ್ನು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದರು. 
ಸಭೆಯಲ್ಲಿ ಎರಡು ಬಣಗಳ ನಡುವೆ ಜೋರಿನ ಮಾತಿನ ಚಾಕಮಕಿ ನಡೆಯಿತು. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು.
ಉಪ ತಹಸೀಲ್ದಾರ್ ಮಹೇಶ್, ಕಂದಾಯ ನೀರಿಕ್ಷಕ ಆನಂದ್, ಎಎಸ್‌ಐ ಗೋಪಾಲ, ಮುಖಂಡರಾದ ಮಹದೇವ್, ಪುಟ್ಟರಾಜು, ಕುಮಾರಶೆಟ್ಟಿ, ವಾಸು, ಸ್ವಾಮಿನಾಯಕ, ಹರೀಶ್ ನಾಯಕ, ಕೊಪ್ಪಲು ಪುಟ್ಟರಾಜು, ಸ್ವಾಮಿಗೌಡ, ಕರೀಗೌಡ, ಕೃಷ್ಣಮೂರ್ತಿ, ತಮ್ಮೆಗೌಡ, ಜೆ.ಡಿ. ಮಹದೇವ್, ಮಲ್ಲೇಶ್ ನಾಯಕ, ರಾಮಯ್ಯ, ಬಿಲ್ಲೂರಯ್ಯ, ಪಾಪಯ್ಯ, ಕಲ್ಯಾಣಿ ಪಾಪ, ಕೆಂಪನಾಯಕ, ಸತೀಶ್ ನಾಯಕ, ಗ್ರಾಮಸ್ಥರು ಇದ್ದರು.