ಎಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿನ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
- ಸಾಹಿತಿ ಡಾ.ಸಂತೋಷ್ ಚೊಕ್ಕಾಡಿ ಕರೆ
- ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ
ಎಚ್.ಡಿ.ಕೋಟೆ: ಕನ್ನಡಿಗರು ಬೇರೆ ಭಾಷಿಕರಿಗೆ ಮಾರುಹೋಗಿ ಕನ್ನಡವನ್ನೇ ತ್ಯಜಿಸುತ್ತಿದ್ದು, ಇಂತಹವರಿಂದ ಕನ್ನಡವನ್ನು ಕಾಪಾಡಬೇಕಿದೆ ಎಂದು ಸಾಹಿತಿ ಡಾ.ಸಂತೋಷ್ ಚೊಕ್ಕಾಡಿ ತಿಳಿಸಿದರು.
ತಾಲೂಕಿನ ತುಂಬಸೋಗೆ ಗ್ರಾಮದಲ್ಲಿನ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಕನ್ನಡಿಗರಿಂದಲೇ ಕನ್ನಡವನ್ನು ಕಾಪಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಕನ್ನಡವು ಕೇವಲ ಭಾಷೆಯಾಗಿ ಉಳಿಯದೆ ನಮ್ಮ ಗುರುತನ್ನು, ನಮ್ಮ ನಡೆಯನ್ನು ಸಹ ತೋರುತ್ತದೆ. ನಮ್ಮ ಭಾಷೆಯನ್ನು ಮರೆತಾಗ ನಮ್ಮ ನಡೆ ಮತ್ತು ಗುರುತು ಸಹ ಇಲ್ಲದಂತಾಗುತ್ತದೆ ಎಂದರು.
ಒಬ್ಬ ಮನುಷ್ಯನಲ್ಲಿ ಜ್ಞಾನ ಇದ್ದಾಗ ಮಾತ್ರ ನಾಡು, ನುಡಿ, ನೆಲ, ಜಲ ಉಳಿಯಲು ಸಾಧ್ಯ. ಭಾಷೆ ಹೇಗೆ ಬಳಸುತ್ತೀರಿ ಎನ್ನುವುದಕ್ಕಿಂತ, ಭಾಷೆಗಾಗಿ ಎಷ್ಟರಮಟ್ಟಿಗೆ ಬದುಕುತ್ತೀರಿ ಎಂಬುದು ಮುಖ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣಕ್ಕೆ, ಆರ್ಥಿಕತೆಗೆ, ಕಾರ್ಖಾನೆಗಳ ಸ್ಥಾಪನೆಗೆ ಒತ್ತು ನೀಡುವುದರ ಜತೆಗೆ ನಾಡು ನುಡಿಗಾಗಿ ಅಪಾರ ಚಿಂತನೆಯನ್ನು ನಡೆಸಿ ಭಾಷೆಯ ಒಳಿತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಎಂದರು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಹಾಲಕ್ಷ್ಮೀ, ಧನುಶ್ರೀ, ಭುವನಾ, ತೇಜಸ್ವಿನಿ ಮತ್ತು ನಿತ್ಯಶ್ರೀ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸರಗೂರು ತಾಲೂಕು ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಮೋಹನ್‌ಕುಮಾರ್, ನಾಗರಾಮ, ಕಾಲೇಜಿನ ಸಿಬ್ಬಂದಿ ಸಿದ್ದರಾಜು, ಮಹಾದೇವಿ ಇದ್ದರು.