ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಸಮಿತಿಯಿಂದ ಲಯನ್ಸ್ ಬ್ಲಡ್ ಡೊನೇಷನ್ ಸೆಂಟರ್ ಜೀವಧಾರ ಸಹಯೋಗದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.
ಬೆಟ್ಟದಪುರ: ರಕ್ತದಾನದಿಂದ ಜೀವ ಉಳಿಸುವುದರ ಜತೆಗೆ ಇನ್ನೊಬ್ಬರಿಗೆ ಜೀವದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಲಯನ್ಸ್ ಬ್ಲಡ್ ಡೊನೇಷನ್ ಸೆಂಟರ್ ಜೀವಧಾರ ಪಿ.ಆರ್.ಒ ಸುರೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಸಮಿತಿಯಿಂದ ಲಯನ್ಸ್ ಬ್ಲಡ್ ಡೊನೇಷನ್ ಸೆಂಟರ್ ಜೀವಧಾರ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ ರಕ್ತದಾನ ಶಿಬಿರ ದಲ್ಲಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ಇನ್ನೂ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ. ಇವುಗಳನ್ನು ಹೋಗಲಾಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾಗಿದೆ. ಹಾಗಾಗಿ ವಿಶೇಷ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗಲಿ ಎಂದರು.
ರೆಡ್ ಕ್ರಾಸ್ ಸಮಿತಿಯ ಸಂಚಾಲಕಿ ಕಾವ್ಯಾ ಮಾತನಾಡಿ, ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಆಯೋಜಿಸುವ ರಕ್ತದಾನ ಶಿಬಿರಗಳು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸಲು ಮತ್ತು ತುರ್ತು ಚಿಕಿತ್ಸೆಗಾಗಿ ರಕ್ತದ ಲಭ್ಯತೆ ಖಚಿತ ಪಡಿಸಲು ಅನುಕೂಲವಾಗಿವೆ. ಪ್ರತಿಯೊಬ್ಬ ರಕ್ತದಾನಿಯು ಜೀವ ಉಳಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ರಕ್ತದಾನ ಮಾಡುವ ವಿಚಾರದಲ್ಲಿ ಯಾವುದೇ ಹಿಂದೇಟು ಹಾಕಬಾರದು. ಕಾಲೇಜಿನಲ್ಲಿ ಶಿಬಿರ ಆಯೋಜಿಸುವುದರಿಂದ ಮಕ್ಕಳಲ್ಲಿ ಪರಹಿತಚಿಂತನೆ ಮತ್ತು ಸಹಾನುಭೂತಿಯ ಮನೋಭಾವ ಬೆಳೆಸುತ್ತದೆ ಎಂದರು.
ಆಧುನಿಕ ದಿನಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ತಪ್ಪು ತಿಳಿವಳಿಕೆ ಕಾರಣ. ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ಆರೋಗ್ಯವಂತ ಯುವ ಸಮೂಹ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗಡ ಹಣ್ಣುಗಳು ಹಾಗೂ ಭೋಜನದ ವ್ಯವಸ್ಥೆ ್ನ ಮಾಡಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಭರತ್ ರಾಜ್ ಅರಸ್, ಐಕ್ಯೂಎ ಸಂಚಾಲಕ ಶಾಕಿರ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪಿ. ಪದ್ಮಾವತಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.