ರಾವಂದೂರು ಗ್ರಾಮದ ದೊಡ್ಡಮ್ಮತಾಯಿ ಚಂದ್ರಮಂಡಲೊತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.  
ಮೈಸೂರು

ದೊಡ್ಡಮ್ಮತಾಯಿ ಚಂದ್ರಮಂಡಲೊತ್ಸವ

ಶಿವಶಂಕರ್ ಎಂ. ಹೆಬ್ಬಳ್ಳ
ರಾವಂದೂರು : ರಾವಂದೂರು ಗ್ರಾಮದ ದೊಡ್ಡಮ್ಮತಾಯಿ ಚಂದ್ರಮಂಡಲೊತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. 
ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಶನಿವಾರ ಬೆಳಗ್ಗೆ ಉತ್ಸವ ಮೂರ್ತಿಯನ್ನು ಚಂದ್ರಮಂಡಲಾಕಾರದ ಹೂವಿನ ಅಲಂಕಾರಯುತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಾರಿ ಗುಡಿಯ ಹತ್ತಿರ ವಿಶೇಷ ಪೂಜೆ ನಡೆಸಲಾಯಿತು. ಇದೇ ವೇಳೆ ಭಕ್ತರು ಹರಕೆಯನ್ನು ತೀರಿಸಿದರು. ತದನಂತರ ಮೆರವಣಿಗೆ ಮೂಲಕ ದೇವಾಲಯವನ್ನು ಪ್ರದಕ್ಷಿಣೆ ಮಾಡಿ ಉಯ್ಯಲೆ ಆಡಿಸಿ ತದನಂತರ ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ 15 ದಿನಗಳಿಂದ ಗ್ರಾಮದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ಸಂಪನ್ನಗೊಂಡವು. ಜಾತ್ರಾ ಮಹೋತ್ಸವಕ್ಕೆ ಬಂದಂತಹ ಭಕ್ತರಿಗೆ ದೊಡ್ಡಮ್ಮತಾಯಿ ಗೆಳೆಯರ ಬಳಗದ ವತಿಯಿಂದ ಪಾನಕ, ಮಜ್ಜಿಗೆ ಹಾಗೂ ಕಲ್ಲಂಗಡಿ ವಿತರಿಸಲಾಯಿತು. ಕೆಲವರು ಮೊಸರನ್ನ ಮತ್ತು ಬಾತ್ ವಿತರಿಸಿದರು. ದೇವಸ್ಥಾನದ ಪಾರುಪತ್ತೆದಾರ್, ಯಜಮಾನರು, ಪ್ರಧಾನ ಅರ್ಚಕರು ಹಾಗೂ ಎಲ್ಲ ಕೋಮಿನ ಯಜಮಾನರು ಭಾಗವಹಿಸಿದರು.