ಮೈಸೂರು ತಾಲೂಕಿನ ದೊಡ್ಡ ಮಾರಗೌಡನಹಳ್ಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಕೆ.ರುಕ್ಮಾಂಗದ, ಸುಮಿತ್ರಾ ಮಾದಪ್ಪ, ಸುಮಾ ಸೋಮನಾಯಕ, ಲತಾ ಪ್ರಸನ್ನಾಚಾರಿ, ವನಿತಾ ಮಂಜುನಾಥ ಇತರರಿದ್ದರು. 
ಮೈಸೂರು

ಅಭಿವೃದ್ಧಿ ಕೆಲಸಕ್ಕೆ ದೊಡ್ಡಮಾರಗೌಡನಹಳ್ಳಿ ಗ್ರಾಪಂ ಮಾದರಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಮೆಚ್ಚುಗೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ದೊಡ್ಡಮಾರಗೌಡನಹಳ್ಳಿ ಗ್ರಾಪಂ ಅಭಿವೃದ್ಧಿ ಕೆಲಸಕ್ಕೆ ಮಾದರಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.]
ತಾಲೂಕಿನ ದೊಡ್ಡ ಮಾರಗೌಡನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಅಬ್ದುಲ್ ನಜೀರ್ ಸಾಬ್ ಜನಾಧಿಕಾರ ಸಭಾಂಗಣ, ಬಸ್ ನಿಲ್ದಾಣವನ್ನು ಸೋಮವಾರ ಉದ್ಘಾಟಿಸಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ಜನರಿಗೆ ಸೇವೆ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡಿದೆ, ಗ್ರಾಮಸ್ಥರೂ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಸಮನ್ವಯದಿಂದಾಗಿ ಪಂಚಾಯಿತಿ ರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇಲ್ಲಿನ ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಬಹಳ ಒಗ್ಗಟ್ಟಿನಿಂದ ಇದ್ದಾರೆ. ಇದರಿಂದ ನನ್ನ ಮೇಲೆ ಒತ್ತಡ ಕಡಿಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಕಟಪೂರ್ವ ಪಿಡಿಒ ಕೆ.ರುಕ್ಮಾಂಗದ ಮಾತನಾಡಿ, ಶಾಸಕರ ಸಲಹೆ ಹಾಗೂ ನಿರ್ದೇಶನದಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಶಾಸಕರ ಕ್ಷೇತ್ರದಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿದ್ದೇನೆ. ಈ ಅವಧಿಯಲ್ಲಿ ಯಾವುದೇ ಒತ್ತಡ ಹಾಕಿಲ್ಲ. ನಿರ್ಭಯವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ನಾನು ವರ್ಗಾವಣೆಯಾಗಿದ್ದರೂ ಉದ್ಘಾಟನೆಗೆ ಆಹ್ವಾನಿಸಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಾದಪ್ಪ, ಪ್ರಮುಖರಾದ ಸುಮಾ ಸೋಮನಾಯಕ, ಲತಾ ಪ್ರಸನ್ನಾಚಾರಿ, ವನಿತಾ ಮಂಜುನಾಥ, ನಂದರರಾಜ, ಪ್ರಭಾ ಶಿವಕುಮಾರ್, ಮಂಗಳಮ್ಮ ಚಾಮಯ್ಯ, ದಾಸಯ್ಯ ಇತರರಿದ್ದರು.