ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಸಚಿವ ಕೆ.ವೆಂಕಟೇಶ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.  
ಮೈಸೂರು

ರಾಗಿ ಖರೀದಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ವೆಂಕಟೇಶ್ ಸೂಚನೆ
  • ಬೆಟ್ಟದಪುರದಲ್ಲಿ ಕೇಂದ್ರ ಉದ್ಘಾಟನೆ
ಬೆಟ್ಟದಪುರ: ರಾಗಿ ಖರೀದಿ ವೇಳೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಹಾಗೂ ವ್ಯಾಪಾರಸ್ಥರಿಗೆ ಅವಕಾಶ ನೀಡದೆ, ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣರದಲ್ಲಿ ಸೋಮವಾರ ಪ್ರಸ್ತುತ ವರ್ಷದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರವು ರೈತರ ಅನುಕೂಲಕ್ಕಾಗಿ ಬೆಂಬಲ ಯೋಜನೆಯಡಿ ರಾಗಿ ಖರೀದಿಸುತ್ತಿದೆ. ಇದರಿಂದ ಅವರ ಜೀವನಕ್ಕೆ ಅನುಕೂಲವಾಗಲಿದೆ. ಆದರೆ, ಮಧ್ಯವರ್ತಿಗಳು, ವ್ಯಾಪಾರಸ್ಥರು ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಲಾಭ ಮಾಡುತ್ತಿರುವುದು ವಿಷಾದನೀಯ. ರೈತರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ಬಾರಿ ಒಬ್ಬ ರೈತನಿಗೆ 20 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 10-50 ಕ್ವಿಂಟಾಲ್‌ವರೆಗೆ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ಗುಣಮಟ್ಟದ ರಾಗಿಯನ್ನು ತರಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಕಳಪೆ ರಾಗಿಯನ್ನು ತೆಗೆದುಕೊಳ್ಳಬಾರದು ಹಾಗೂ ಯಾರ ಒತ್ತಡಕ್ಕೂ ಮಣಿಯಬಾರದು. ತಾಲೂಕಿನಲ್ಲಿರುವ ನಾಲ್ಕು ಕೇಂದ್ರಗಳಿಗೂ ತಲಾ ನಾಲ್ಕು ಜನ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗುವುದು. ರೈತರು ಯಾವುದೇ ಕೂಲಿಯನ್ನು ಯಾರಿಗೂ ನೀಡಬಾರದು. ಕೂಲಿ ನೀಡುವ ಜವಾಬ್ದಾರಿ ಗುತ್ತಿಗೆದಾರರು ನೋಡಿಕೊಳ್ಳತ್ತಾರೆ. ಸ್ಥಳೀಯ ಖರೀದಿ ಕೇಂದ್ರದ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುವ ಭರವಸೆ ಇದೆ. ರೈತರ ಸಹಕಾರ ಕೂಡ ಇರಲಿ ಎಂದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ ಮಾತನಾಡಿ, ರಾಗಿ ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸೂಚನೆ ಹಾಗೂ ಮಾಹಿತಿ ಫಲಕ ಹಾಕಬೇಕು. ರೈತರು ತರುವ ರಾಗಿಯಲ್ಲಿ ಚೀಲದ ತೂಕ ಎಂದು ನೆಪ ಹೇಳುವ ಮೂಲಕ ಹೆಚ್ಚು ತೂಕ ಕಳೆಯಬಾರದು. ಎಲ್ಲ ರೈತರಿಗೂ ಒಂದೇ ನ್ಯಾಯ ಸಿಗಬೇಕಿದೆ. ನೋಂದಣಿ ಪ್ರಕಾರದ ಸಾಲಿನಲ್ಲಿ ರಾಗಿ ಖರೀದಿ ಮಾಡಬೇಕು, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಬೇಕು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರೈತಮುಖಂಡರಾದ ಕೊಣಸೂರು ಆನಂದ್, ಮಲ್ಲೇಶ್, ವಿಜಯರಾಜೆಅರಸ್, ಜಯಚಂದ್ರ, ಚಿಕ್ಕೇಗೌಡ, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಕಿರಣ್, ಶಿರಸ್ತೇದಾರ್ ಸಣ್ಣಸ್ವಾಮಿ, ಖರೀದಿ ಕೇಂದ್ರದ ಅಧಿಕಾರಿ ಎಂ.ಆರ್.ಮಂಜುನಾಥ್, ತಹಸೀಲ್ದಾರ್ ನಿಸರ್ಗ ಪ್ರಿಯಾ ಜೆ, ತಾಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ಉಪತಹಸೀಲ್ದಾರ್ ಶಶಿಧರ್, ಪಿಡಿಒ ಮಂಜುನಾಥ್ ಇತರರು ಇದ್ದರು.