ಕೆ.ಜಿ.ಕೊಪ್ಪಲು ಕನ್ನಡ ಗೆಳೆಯರ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಶರತ್, ಡಾ.ಡಿ.ಸಿ.ಉಮೇಶ್, ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಕಾರ್ತಿಕ್ ನಾಯಕ್, ಬಿ.ತನುಜಾ ದೇವರಾಜ್ ಇತರರು ಇದ್ದರು. 
ಮೈಸೂರು

ಮಹಿಳಾ ಸಬಲೀಕರಣಕ್ಕೆ ಹೋರಾಡಿದ ದಿಟ್ಟೆ: ವಕೀಲ ಶರತ್ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಜಾತಿ ತಾರತ್ಯಮದ ವಿರುದ್ಧ ಹೋರಾಡಿ ಸಮಾನತೆ ತರುವಲ್ಲಿ ಶ್ರಮಿಸಿದವರು
  • ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿ ಅಕ್ಷರಗಳನ್ನು ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ
ಮೈಸೂರು: ಕೆ.ಜಿ.ಕೊಪ್ಪಲಿನ ಕನ್ನಡ ಗೆಳೆಯರ ಬಳಗದಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು.
ಬಳಗದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ವಕೀಲ ಶರತ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಜಾತಿ ವ್ಯವಸ್ಥೆ ವಿರುದ್ದ ಹೋರಾಡಿದ ಮಹಿಳಾ ಸಾಧಕಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಎಂದು ಬಣ್ಣಿಸಿದರು.
ಅಸ್ಪಶ್ಯರು ಮತ್ತು ದೀನ ದಲಿತರಿಗಾಗಿ ಧ್ವನಿ ಎತ್ತಿ ಜಾತಿ ತಾರತ್ಯಮದ ವಿರುದ್ಧ ಹೋರಾಡಿ ಸಮಾನತೆ ತರುವಲ್ಲಿ ಶ್ರಮಿಸಿದವರು. ಶಿಕ್ಷಣದ ಮೂಲಕ ಸಮಾಜದ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ತಿಳಿಸಿದರು.
ಶಾರದಾ ವಿಲಾಸ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಉಮೇಶ್ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರು 1848ರಲ್ಲಿಯೇ ಪುಣೆಯಲ್ಲಿ ದೇಶದಲ್ಲೇ ಮೊದಲ ಬಾಲಕಿಯರ ಶಾಲೆ ತೆರೆದು, ಶೂದ್ರರು, ಮಹಿಳೆಯರಿಗೆ ಶಿಕ್ಷಣ ಕಲಿಸಿದ ಮೊದಲ ಗುರು ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ಭಾರತೀಯ ಸಮಾಜದ ಪರಿವರ್ತನೆಯ ಪಿತಾಮಹಾ ಎಂದು ಗೌರವಪೂರ್ವಕವಾಗಿ ಕರೆದಿದ್ದಾರೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಕಾರ್ತಿಕ್ ನಾಯಕ್ ಮಾತನಾಡಿ, ಶಿಕ್ಷಣ, ಸಮಾನತೆ, ಮಾನವ ಸಂಘಟನೆಗಾಗಿ ಹೋರಾಡಿದ ಭಾರತದ ಹೆಮ್ಮೆಯ ಪುತ್ರಿ ಸಾವಿತ್ರಿಬಾಯಿ ಬಾ ಫುಲೆ, ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ ನೋವು ಅವಮಾನಗಳನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿ ಅಕ್ಷರಗಳನ್ನು ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದರು.
ಮಕ್ಕಳಕೂಟ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕರಾದ ಬಿ.ತನುಜಾ ದೇವರಾಜ್, ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಸಮಾಜ ಸೇವಕರಾದ ನಂಜುಂಡ, ಮಾದೇವ ಇತರರು ಇದ್ದರು.