ಎಚ್.ಡಿ.ಕೋಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಗಣ್ಯರು ವಾತ್ಸಲ್ಯ ಕಿಟ್‌ಗಳನ್ನು ವಿತರಿಸಿದರು. ಗಂಗಾಧರ್, ಚೈತ್ರಾ, ಮಂಗಳಾ ಹಾಗೂ ಸದಸ್ಯರು ಇದ್ದರು.
ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ 63 ಫಲಾನುಭವಿಗಳಿಗೆ ಗುರುವಾರ ವಾತ್ಸಲ್ಯ ಕಿಟ್‌ಗಳನ್ನು ವಿತರಿಸಲಾಯಿತು.
ಪಟ್ಟಣದ ನಿವಾಸಿ ಮನಿಯಮ್ಮ ಅವರಿಗೆ ವಾತ್ಸಲ್ಯ ಕಿಟ್‌ಅನ್ನು ಕ್ಷೇತ್ರ ಯೋಜನಾಧಿಕಾರಿ ವಿ.ಭಾಸ್ಕರ್ ವಿತರಿಸಿ ಮಾತನಾಡಿ, ದುಡಿಯಲು ಶಕ್ತಿಯಿಲ್ಲದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಅಶಕ್ತರಿಗೆ ಜೀವನ ನಿರ್ವಣೆಗಾಗಿ ಪ್ರತಿ ತಿಂಗಳು ಯೋಜನೆಯಿಂದ ಮಾಸಾಶನವನ್ನು ನೀಡಲಾಗುತ್ತಿದೆ. ತಾಲೂಕಿನಲ್ಲಿ 180 ಜನರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಇದರಲ್ಲಿ ಮಾಸಾಶನ ಪಡೆಯುವ 63 ಸದಸ್ಯರಿಗೆ ದೈನಂದಿನ ಬಳಕೆ ವಸ್ತುಗಳಾದ ಪಾತ್ರೆ, ಚಾಪೆ, ದಿಂಬು, ದಿಂಬಿನ ಕವರ್, ಬೆಡ್ ಶೀಟ್, ಉಡುಗೆಯ ಬಟ್ಟೆ, ವಾತ್ಸಲ್ಯಮಿಕ್ಸ್, ಸೋಪು ಒಳಗೊಂಡ ವಾತ್ಸಲ್ಯಕಿಟ್‌ಅನ್ನು ವಿತರಣೆ ಮಾಡಲಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವುದರ ಜತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಆಶಕ್ತರ ಅನುಕೂಲಕ್ಕಾಗಿ ಜನಮಂಗಲ ಕಾರ್ಯಕ್ರಮದಡಿಯಲ್ಲಿ ರಾಜ್ಯದ 4,400 ಜನರಿಗೆ ವಾಕರ್, ವಾಟರ್ ಬೆಡ್ ಮತ್ತು ವೀಲ್ ಚೇರನ್ನು ನೀಡಲಾಗಿದೆ.
ನಿರುದ್ಯೋಗಿಗಳಿಗೆ ಸಂಸ್ಥೆಯಿಂದ ಕಂಪ್ಯೂಟರ್, ಟೈಲರಿಂಗ್, ಕಸೂತಿ, ಸಿದ್ಧ ಉಡುಪು, ಬ್ಯುಟೀಷಿಯನ್ ಸೇರಿದಂತೆ ಅನೇಕ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 63 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದ್ದು, 508 ಶಾಲೆಗಳಿಗೆ ಡೆಸ್ಕ್ ಮತ್ತು ಬೆಂಚುಗಳನ್ನು ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾಗಿದೆ ಎಂದರು.