ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪ ಬುಧವಾರ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನ’ ಕಾರ್ಯಕ್ರಮವನ್ನು ಡಾ.ಪಿ.ಶಿವರಾಜು ಉದ್ಘಾಟಿಸಿದರು. ಭಾಸ್ಕರ್ ನಾಯಕ್, ಬಿ.ಬಸವರಾಜು, ಕೆ.ಎಸ್.ರಾಘವೇಂದ್ರ, ದೀಕ್ಷಿತ್, ಮೋಹನ್, ಸತೀಶ್, ನೀರಜ್ ಇತರರಿದ್ದರು.
- ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿಕೆ
- ವಿಶ್ವ ಅಂಗವಿಕಲರ ದಿನಾಚರಣೆ
- ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ
ಮೈಸೂರು: ಅಂಗವಿಕಲರು ಇತರರಿಗಿಂತಲೂ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶದ ಸಂಪತ್ತಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನನು ಸೇವೆಗಳ ಪ್ರಾಧಿಕಾರ, ಮೈಸೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪ ಬುಧವಾರ ಆಯೋಜಿಸಿದ್ದ ‘ವಿಶ್ವ ಅಂಗವಿಕಲರ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲತೆ ಇದೆ, ಏನು ಸಾಧನೆ ಮಾಡಲು ಆಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು, ಅಂಗವಿಕಲ ಮಕ್ಕಳು ಎಲ್ಲ ಅಂಗಗಳು ಸರಿ ಇರುವವರಿಗಿಂತ ಹೆಚ್ಚಿನ ಸಾಧನೆ ಮಾಡಿರುವಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಪ್ರತಿಭೆ ಯಾರ ಸ್ವತ್ತು ಅಲ್ಲ. ಅದು ಸಾಧಕರ ಸ್ವತ್ತು. ಎಲ್ಲ ಅಂಗವಿಕಲರು ಸಹ ತಮ್ಮ ಸಾಮರ್ಥ್ಯ ಗರಿಷ್ಠ ಪ್ರಮಾಣದ ಪ್ರದರ್ಶನ ನೀಡುತ್ತಾ ಸಮಾಜಕ್ಕೆ ಕೊಡುಗೆ ನೀಡಬೇಕು. ನೀವು ಸಹ ಈ ಸಮಾಜದ ಆಸ್ತಿ ಆಗಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮಾತನಾಡಿ, ಈ ಸಮಾಜದಲ್ಲಿ ಸಶಕ್ತರಾಗಿರುವಂತಹ ವ್ಯಕ್ತಿಗಳು ಅಂಗವಿಕಲರನ್ನು ಸಹೋದರ, ಸಹೋದರಿಯರ ರೀತಿ ಕಾಣಬೇಕು. ಜತೆಗೆ ತಂದೆ ತಾಯಿ ಹಾಗೂ ಹಿರಿಯ ನಾಗರಿಕರನ್ನು ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ನಾವು ಮಾನವೀಯ ಧರ್ಮ ಪಾಲಿಸಬೇಕು. ನಮ್ಮ ಜತೆಯಲ್ಲಿರುವಂತಹ ಎಲ್ಲ ಜೀವಿಗಳನ್ನು ಗೌರವದಿಂದ ಕಾಣವ ಮೂಲಕ ಬದುಕಲು ಅವಕಾಶ ಕೊಡಬೇಕು ಎಂದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಯು ಎಲ್ಲ ಅಂಗವಿಕಲ ಮಕ್ಕಳು, ಮಹಿಳೆಯರ ಏಳಿಗೆಗೆ ಯಾವಾಗಲೂ ಇರುತ್ತೇವೆ. ನಿಮ್ಮ ಯಾವುದೇ ಕುಂದು ಕೊರತೆಗಳನ್ನು ಪ್ರಥಮ ಆದ್ಯತೆಗಳಲ್ಲಿ ಪರಿಶೀಲಿಸುತ್ತೇವೆ. ನೀವು ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ, ಕ್ರೀಡಾ ವಿಕಲಚೇತನ ಒಕ್ಕೂಟದ ಅಧ್ಯಕ್ಷ ದೀಕ್ಷಿತ್, ಸರ್ಕಾರಿ ಬ್ರೈಲ್ ಮುದ್ರಣಾಲಯದ ಮೋಹನ್, ಸರ್ಕಾರಿ ಅಂದ ಮಕ್ಕಳ ಶಾಲೆಯ ಸತೀಶ್, ಸರ್ಕಾರಿ ಕಿವುಡ ಮಕ್ಕಳ ಶಾಲೆಯ ನೀರಜ್ ಇತರರಿದ್ದರು.