ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮುಕ್ತ ದಿನವನ್ನು ಗಣ್ಯರು ಉದ್ಘಾಟಿಸಿದರು. ಆರ್.ಆನಂದ, ಬಿ.ಇಳಂಗೋವನ್, ಡಾ. ಬಿ.ಸುರೇಶ್, ಅಂಶಿ ಪ್ರಸನ್ನಕುಮಾರ್, ಡಾ. ಎಸ್.ಜಿ. ಶ್ರೀಕಂಠಸ್ವಾಮಿ, ಎನ್.ಎಂ.ಶಿವಕುಮಾರಸ್ವಾಮಿ, ಡಾ.ಪಳನಿಸ್ವಾಮಿ ಇದ್ದರು.
ಮೈಸೂರು: ನಗರದ ಎಸ್‌ಜೆಸಿಇ ಕ್ಯಾಂಪಸ್ಸಿನಲ್ಲಿ ಇರುವ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಮುಕ್ತ ದಿನ ಆಚರಿಸಲಾಯಿತು.
ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ ಸುಮಾರು 40ಕ್ಕೂ ಹೆಚ್ಚು ತಂಡಗಳು ಪ್ರದರ್ಶಿಸಿದ ಆರ್ಕಿಟೆಕ್ಚರ್, ಕಟ್ಟಡಗಳ ನಿರ್ಮಾಣ ವಿನ್ಯಾಸ, ಸಾರ್ವಜನಿಕ ಸೇವಾ ವಲಯಗಳ ಬಹು ಮಹಡಿ ಕಟ್ಟಡಗಳ ಮಾದರಿ, ಹೊಸರೀತಿಯ ಎಟಿಎಂ ಮಷಿನ್, ಕಂಪ್ಯೂಟರ್ ಪ್ರೋಗ್ರಾಮಿಂಗ್ ಮುಂತಾದ ಮಾದರಿಗಳು ಆಕರ್ಷಿಸಿದವು.
ತಕ್ಕಡಿಯ ಮೂಲಕ ಬ್ಯಾಲೆನ್ಸ್‌ಶಿಟ್ ಮಾದರಿಯೂ ನೋಡುಗರನ್ನು ಹುಬ್ಬೆರಿಸುವಂತೆ ಮಾಡಿತು. ಆಸ್ತಿಗಳು ತಕ್ಕಡಿಯ ಒಂದು ತಟ್ಟೆಯಲ್ಲಿ, ಹೊಣೆಗಾರಿಕೆಗಳು ಮತ್ತೊಂದು ತಟ್ಟೆಯಲ್ಲಿ ಸಮನಾಗಿ ಇದ್ದಾಗ ಮಾತ್ರ ತಕ್ಕಡಿಯ ಇರುವ ಮುಳ್ಳು ಸರಿಯಾಗಿ ಮಧ್ಯದಲ್ಲಿ ನಿಲ್ಲುತ್ತದೆ ಎನ್ನುವ ತತ್ವವನ್ನು ಸಾದರಪಡಿಸಲಾಯಿತು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಜ್ಞಾನ ಮತ್ತು ತಾಂತ್ರಿಕ ಅಕಾಡೆಮಿಯ ಸಿಇಒ ಆರ್.ಆನಂದ ಮಾತನಾಡಿ, ವಸ್ತುಪ್ರದರ್ಶನದಲ್ಲಿನ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದಾಗ, ವಿಶೇಷಚೇತನರಲ್ಲಿ ಯಾವುದೇ ಮಿತಿಗಳು ಕಾಣುತ್ತಿಲ್ಲ. ಬದಲಾಗಿ ಆಲೋಚನೆಗಳು, ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಂಗವೈಕಲ್ಯವು ಸಾಮರ್ಥ್ಯಕ್ಕೆ ಅಡ್ಡಿಯಲ್ಲ. ಅದು ಹೊಸ ರೀತಿಯಲ್ಲಿ ಯೋಚಿಸುವ ಶಕ್ತಿಯಾಗಿದೆ ಎಂಬುದನ್ನು ಮಾಡೆಲ್‌ಗಳನ್ನು ತಯಾರಿಸುವ ಮೂಲಕ ಸಾಬೀತುಪಡಿಸಲಾಗಿದೆ ಎಂದರು.
ವಿಜ್ಞಾನವೆಂದರೆ ಕೇವಲ ಪಠ್ಯಪುಸ್ತಕ ಅಥವಾ ಪ್ರಯೋಗಾಲಯಕ್ಕೆ ಸೀಮಿತವಲ್ಲ. ಅದು ಪ್ರಶ್ನೆ ಕೇಳುವ ಮನಸ್ಸು, ಸಮಸ್ಯೆಯನ್ನು ಗುರುತಿಸುವ ದೃಷ್ಟಿ ಮತ್ತು ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪವಾಗಿದೆ. ಹೀಗಾಗಿ ವಿಜ್ಞಾನ ಪ್ರದರ್ಶನವನ್ನು ನಿಮ್ಮ ಜೀವನದ ಒಂದು ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಬೇಕು. ನಿರಂತರವಾಗಿ ಪ್ರಶ್ನೆ ಕೇಳಿ, ಪ್ರಯೋಗ ಮಾಡಿ, ಹೊಸದನ್ನು ಅನ್ವೇಷಿಸಿ. ಜತೆಗೆ ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿರಬೇಕು. ಏಕೆಂದರೆ ಭವಿಷ್ಯದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನಿಮ್ಮಂತಹ ವಿಭಿನ್ನ ಪ್ರತಿಭೆಗಳು ಅತ್ಯಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಗುರುಗಳು, ಮಾರ್ಗದರ್ಶಕರು ಮತ್ತು ಪಾಲಕರು ಅಭಿನಂದನೆಗೆ ಅರ್ಹರು. ಅಲ್ಲದೇ ವಿಶೇಷಚೇತನ ವಿದ್ಯಾರ್ಥಿಗಳಿಗೆ ಇಂತಹ ಸೂಕ್ತ ವೇದಿಕೆಗಳು ದೊರೆತು, ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾಗ ಅವರು ಸಮಾಜಕ್ಕೆ ನಿಜವಾದ ಪ್ರೇರಣೆಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ಅಥವಾ ಇತರ ಕ್ಷೇತ್ರಗಳಲ್ಲಿ ವಿಶೇಷಚೇತರ ಸಾಧನೆಯನ್ನು ಸ್ಮರಿಸುವುದಾದರೆ ಸ್ಟೀಫನ್ ಹಾಕಿಂಗ್ ಅವರಂತಹ ವಿಜ್ಞಾನಿಗಳು ಕಣ್ಣ ಮುಂದೆ ಬರುತ್ತದೆ. ದೈಹಿಕ ಮಿತಿಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಆಟಿಸಂ ಹೊಂದಿದ್ದರೂ ಟೆಂಪಲ್ ಗ್ರಾಂಡಿನ್ ಅವರು ಪ್ರಾಣಿ ವಿಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಹೆಲೆನ್ ಕೆಲ್ಲರ್,ಜಾನ್ ನ್ಯಾಶ್ ತಮ್ಮ- ತಮ್ಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಭಾರತದಲ್ಲಿಯೂ ಹಲವಾರು ವಿಜ್ಞಾನಿಗಳು ಮತ್ತು ತಂತ್ರಜ್ಞರು ದೈಹಿಕ ಸವಾಲುಗಳನ್ನು ಮೀರಿ ಇಸ್ರೋ, ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆ ಮುಂತಾದ ಸಂಸ್ಥೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಡಾ. ಜೀತೇಂದ್ರ ಸಿಂಗ್, ಡಾ. ರಾಮಾನುಜನ್ ಐಯ್ಯರ್, ಡಾ. ಅನಿತಾ ಗುಪ್ತ, ಡಾ. ನರೇಂದ್ರ ಜಾಧವ್ ಇವರ ಸಾಧನೆಗಳು ಸೂಕ್ತ ಅವಕಾಶ ದೊರೆತರೆ ಪ್ರತಿಭೆ ಖಂಡಿತವಾಗಿ ಬೆಳೆಯುತ್ತದ ಎಂಬುದನ್ನು ತೋರಿಸುತ್ತವೆ ಎಂದರು.
ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಬಿ.ಇಳಂಗೋವನ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ವಿಭಾಗದ ನಿರ್ದೇಶಕ ಡಾ. ಬಿ.ಸುರೇಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಾ. ಎಸ್.ಜಿ. ಶ್ರೀಕಂಠಸ್ವಾಮಿ, ಎನ್.ಎಂ.ಶಿವಕುಮಾರಸ್ವಾಮಿ, ಡಾ.ಪಳನಿಸ್ವಾಮಿ ಮತ್ತಿತರರು ಹಾಜರಿದ್ದರು.
*ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.