ಗಣ್ಯರು ಮಾವುತರಿಗೆ ಉಪಹಾರ ಬಡಿಸಿದರು 
ಮೈಸೂರು

ಮಾವುತರಿಗೆ ರುಚಿಕರ ಉಪಾಹಾರದ ಸವಿ

ಬಗೆ ಬಗೆಯ ಖಾದ್ಯ ಬಡಿಸಿದ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರ ನೇತೃತ್ವ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ದಸರಾ ಗಜಪಡೆಯೊಂದಿಗೆ ಭಾಗಿಯಾಗಿರುವ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅರಮನೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ವಿಶೇಷ ಉಪಾಹಾರ ವ್ಯವಸ್ಥೆ ಮಾಡಲಾಯಿತು.

ಉಪಾಹಾರದಲ್ಲಿ ಒಬ್ಬಟ್ಟು, ತುಪ್ಪ, ಇಡ್ಲಿ, ಸಾಂಬಾರ್, ಚಟ್ನಿ, ವಡೆ, ದೋಸೆ, ಸಾಗು, ಪೊಂಗಲ್, ಹುಳಿಗೊಜ್ಜು, ಉಪ್ಪಿಟ್ಟು, ಜಿಲೇಬಿ ಹಾಗೂ ಕಾಫಿ, ಟೀ ಮತ್ತು ಕಷಾಯ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಉಣಬಡಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಪಾಲಿಕೆ ಆಯುಕ್ತೆ ಸವೀತಾ ಸೇರಿದಂತೆ ಹಲವು ಗಣ್ಯರು ಮಾವುತರು ಮತ್ತು ಕಾವಾಡಿಗಳಿಗೆ ಉಪಾಹಾರ ಬಡಿಸಿದರು. ಬಳಿಕ ಅವರೊಂದಿಗೆ ಕುಳಿತು ಉಪಾಹಾರ ಸೇವಿಸಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾಂಗ್ರೆಸ್ ಮುಖಂಡ ಡಾ.ಬಿ.ಜೆ.ವಿಜಯ್ ಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಡಿಸಿಎ್ ಡಾ.ಐ.ಬಿ.ಪ್ರಭುಗೌಡ, ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಮಕ್ಕಳಿಗೆ ಬ್ಯಾಗ್ ವಿತರಣೆ:

ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕೃತವಾಗಿ ಉದ್ಘಾಟಿಸಿದರು. ಜತೆಗೆ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಲೇಖನ ಸಾಮಗ್ರಿ ಹಾಗೂ ಆಟದ ಸಾಮಗ್ರಿಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳು ವಿವಿಧ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಆರೋಗ್ಯ ತಪಾಸಣೆ:

ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸೈನಿಕ್ ಆಸ್ಪತ್ರೆಯ 10 ವೈದ್ಯರು ಸೇರಿದಂತೆ 40ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ಬಿಪಿ, ಶುಗರ್, ಕಣ್ಣು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು.