ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಘೋಷ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಎನ್.ಮಹೇಶ್, ಕೋಟೆ ಎಂ.ಶಿವಣ್ಣ, ಅಶ್ವಿನ್‌ಕುಮಾರ್ ಇತರರಿದ್ದರು. 
ಮೈಸೂರು

ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿಧಿ ನಾಲ್ಕು ವಲಯಗಳಿಗೆ ಹಂಚಲಿ

* ನಿಧಿ ಸದ್ಬಳಕೆ ಜನಾಂದೋಲನ ವೇದಿಕೆ ಒತ್ತಾಯ ವಿಭಾಗ ಮಟ್ಟದ ವಿಚಾರ ಸಂಕಿರಣ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನಿಧಿಯನ್ನು 39 ಇಲಾಖೆಗಳಿಗೆ ಹಂಚಿಕೆ ಮಾಡುವ ಪದ್ಧತಿಯನ್ನು ಕೈಬಿಟ್ಟು, ಯೋಜನಾ ಆಯೋಗದ ಶಿಫಾರಸ್ಸಿನಂತೆ ನಾಲ್ಕು ಪ್ರಮುಖ ವಲಯಗಳಿಗೆ ಹಂಚಿಕೆ ಮಾಡಬೇಕು ಎಂದು ಎಸ್‌ಸಿಎಸ್‌ಪಿಟಿಎಸ್‌ಪಿ ಮೀಸಲು ನಿಧಿ ಸದ್ಬಳಕೆ ಜನಾಂದೋಲನ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ವಿಚಾರ ಸಂಕಿರಣ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಕುರಿತು ಹಕ್ಕೋತ್ತಾಯ ಮಂಡಿಸಲಾಯಿತು.

ಸಭೆಯಲ್ಲಿ ಹಾಜರಿದ್ದವರು ನಿರ್ಣಯವನ್ನು ಅನುಮೋದಿಸಿ, ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಸ್‌ಸಿಎಸ್‌ಪಿಟಿಎಸ್‌ಪಿ ನಿಧಿಯನ್ನು 39 ಇಲಾಖೆಗಳಿಗೆ ಹಂಚಿಕೆ ಮಾಡುವ ಬದಲಾಗಿ, ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ಶೇ.40, ಆರೋಗ್ಯ ಕ್ಷೇತ್ರಕ್ಕೆ ಶೇ.10, ವಸತಿ ಮೂಲ ಸೌಕರ್ಯಕ್ಕೆ ಶೇ.25 ಹಾಗೂ ಆದಾಯ ಹೆಚ್ಚಿಸುವ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶೇ.25ರಷ್ಟು ಅನುದಾನ ಮೀಸಲಿಡಬೇಕು ಎಂದು ಹಕ್ಕೊತ್ತಾಯದಲ್ಲಿ ತಿಳಿಸಲಾಗಿದೆ.

ಎಸ್‌ಸಿಎಸ್‌ಪಿಟಿಎಸ್‌ಪಿ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು ಪುನರ್‌ಪರಿಶೀಲಿಸಿ, ಮೀಸಲು ನಿಧಿಯನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲು ಅವಕಾಶ ನೀಡುವ ಅಂಶಗಳನ್ನು ರದ್ದುಪಡಿಸಿ ಕಾಯ್ದೆಯನ್ನು ಸಮಗ್ರವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ.

ಮಾಜಿ ಸಚಿವರಾದ ಎನ್.ಮಹೇಶ್, ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್, ಭಾರತೀಯ ಪರಿವರ್ತನಾ ಸಂಘದ ರಾಜ್ಯಾಧ್ಯಕ್ಷ ಹರಿರಾಮ್, ಮಾದಿಗ ಸಮಾಜದ ಮುಖಂಡ ಅರಕಲವಾಡಿ ನಾಗೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೈಗಾರಿಕೋದ್ಯಮಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿರಾಜ್ ಹಾಗೂ ಉದ್ಯಮಿಗಳ ಸಂಘದ ಅಧ್ಯಕ್ಷ ವಿಜಯಶಂಖರ್ ಸಮುಖದಲ್ಲಿ ಹಕ್ಕೊತ್ತಾಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಸಿಎಸ್‌ಪಿಟಿಎಸ್‌ಪಿ ಸಾಮಾಜಿಕ ನ್ಯಾಯದ ಆರ್ಥಿಕ ವಂಚನೆ ಮತ್ತು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಜನಘೋಷ ಪುಸ್ತಕಗಳನ್ನು ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಪ್ರೇಮಕುಮಾರ್ ಬಿಡುಗಡೆ ಮಾಡಿದರು. ಜಾಗೃತಿ ಮತ್ತು ಐಕ್ಯತಾ ಗೀತೆಯನ್ನು ಮಾಜಿ ಶಾಸಕ ಅಶ್ವಿನ್‌ಕುಮಾರ್ ಬಿಡುಗಡೆ ಮಾಡಿದರು.

ಸಂಚಾಲಕ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, 2013ರಲ್ಲಿ ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿದ್ದರೂ, ಮೀಸಲಿಟ್ಟ ಹಣದ ಬಳಕೆಯಿಂದ ನಿರೀಕ್ಷಿತ ಪ್ರಮಾಣದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಂಡುಬಂದಿಲ್ಲ ಎಂದು ದೂರಿದರು. ದಲಿತರ ಅಭಿವೃದ್ಧಿಗೆ 3.14 ಲಕ್ಷ ರೂ.ಕೋಟಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಫಲಿತಾಂಶ ಶೂನ್ಯವಾಗಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದ ಹೋರಾಟಗಾರ್ತಿ ರತ್ನಮ್ಮ, ದಸಂಸ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪನಾಯಕ, ಭಾರತೀಯ ವಿದ್ಯಾರ್ಥಿ ಸಂಘದ ರಾಜ್ಯ ಸಂಯೋಜಕ ಡಾ.ಬಿ.ಶ್ರೀನಿವಾಸ್, ಸೋಸಲೆ ಸಿದ್ದರಾಜು, ನಾಗರಾಜು, ಎಂ.ಲೋಕೇಶ್ ಇದ್ದರು.