ಮಾನಸ ಗಂಗೋತ್ರಿಯ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ (ಎಂಎಂಟಿಟಿಸಿ) ದಲ್ಲಿ ಬುಧವಾರ ಆಯೋಜಿಸಿದ್ದ ಪುನಶ್ವೇತನ ಶಿಬಿರವನ್ನು ಪ್ರೊ.ಎಂ.ಆರ್.ಗಂಗಾಧರ್ ಉದ್ಘಾಟಿಸಿದರು. ಪ್ರೊ.ಎಚ್.ಪಿ ಜ್ಯೋತಿ, ಪ್ರೊ.ವೈ.ಎಚ್ ನಾಯಕವಾಡಿ, ಡಾ.ಎಲ್.ನಂಜುಂಡಸ್ವಾಮಿ ಇದ್ದರು.
- ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿಕೆ
ಮೈಸೂರು: ಎಐ ತಂತ್ರಜ್ಞಾನ, ಡಿಜಿಟಲೀಕರಣದಿಂದಾಗಿ ಸಮಾಜ ವಿಜ್ಞಾನಕ್ಕೆ ಹೊಸ ರೂಪ ನೀಡಿದಂತಾಗುತ್ತದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ತಿಳಿಸಿದರು.
ಮಾನಸ ಗಂಗೋತ್ರಿಯ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ (ಎಂಎಂಟಿಟಿಸಿ) ದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಿಂದ ಬುಧವಾರ ಆಯೋಜಿಸಿದ್ದ 30ನೇ ಇತಿಹಾಸ ಪುನಶ್ಚೇತನ ಶಿಬಿರದಲ್ಲಿ ಭಾರತದ ಸಾಮಾಜಿಕ, ಆರ್ಥಿಕ ಇತಿಹಾಸದಲ್ಲಿ ಹೊಸ ವಿಧಾನಗಳು ವಿಷಯ ಕುರಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಡಿಜಿಟಲೀಕರಣದ ಯುಗವಾಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡು ಹೆಚ್ಚು ಅಭಿವೃದ್ಧಿಯಾಗುತ್ತಿದೆ. ಇತಿಹಾಸದ ಕ್ರಿಯಾತ್ಮಕ ಕೆಲಸಗಳನ್ನು ನಿರ್ವಹಿಸಲು ಅತ್ಯುತ್ತಮ ಅವಕಾಶ ದೊರೆಯಲಿದೆ. ಈ ಮೂಲಕ ಇತಿಹಾಸ ಸಮೀಕ್ಷೆ ವರದಿ, ಗೆಜೆಟೀಯರ್ ಸೇರಿದಂತೆ ಹಲವು ಡೇಟಾಗಳನ್ನು ಹೆಚ್ಚು ವಿಶ್ಲೇಷಣೆ ಮಾಡಲು ಅನುಕೂಲವಾಗಲಿದೆ. ಅಲ್ಲದೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಡಿಜಿಟಲೀಕರಣದಿಂದಾಗಿ ಸಮಾಜ ವಿಜ್ಞಾನಕ್ಕೆ ಹೊಸ ರೂಪ ನೀಡುತ್ತಿದೆ. ಇದರಿಂದ ಕಡೆಗಣಿಸಲ್ಪಟ್ಟ ಸಮಾಜ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಇದನ್ನು ಅರಿತು ಕೇಂದ್ರ ಸರ್ಕಾರ ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ಸಮಾಜ ವಿಜ್ಞಾನಕ್ಕೆ ಪ್ರೋತ್ಸಾಹ ದೊರೆಯಲಿದೆ ಎಂದು ತಿಳಿಸಿದರು.
ನಾಗರಿಕತೆ ಬೆಳೆದಂತೆ ಹೊಸ ವಿಧಾನಗಳಿಂದ ದೇಶದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯೂ ರಾಷ್ಟ್ರೀಕರಣ ಹಾಗೂ ಜಾಗತೀಕರಣದ ಜತೆಗೆ ಬದಲಾಗುತ್ತಾ ಬಂದಿದೆ. ಭಾರತದಲ್ಲಿ ಇತಿಹಾಸ, ಅರ್ಥಶಾಸ್ತ್ರ ಮತ್ತು ಮಾನವಶಾಸ್ತ್ರಗಳಿಗೆ ಒಂದಕ್ಕೊಂದು ಸಂಬಂಧವಿದ್ದು, ದೇಶದ ಸಾಮಾಜಿಕ, ಆರ್ಥಿಕ ಇತಿಹಾಸ ತನ್ನದೇ ಆದ ವಿಶಾಲ ವೈವಿಧ್ಯತೆಗಳನ್ನು ಹೊಂದಿದೆ. ನಾಗರಿಕತೆ ಬೆಳೆದಂತೆ ವಸಾಹತು ರಾಷ್ಟ್ರೀಕರಣ ಮತ್ತು ಜಾಗತೀಕರಣದ ಜತೆಗೆ ಬದಲಾಗುತ್ತಾ ಬಂದಿದೆ ಎಂದರು.
ಎಂಎಂಟಿಟಿಸಿ ನಿರ್ದೇಶಕಿ ಪ್ರೊ.ಎಚ್.ಪಿ ಜ್ಯೋತಿ, ಶಿಬಿರ ಸಂಯೋಜಕ ಪ್ರೊ.ವೈ.ಎಚ್.ನಾಯಕವಾಡಿ, ಸಹಾಯಕ ಪ್ರಾಧ್ಯಾಪಕ ಡಾ.ಎಲ್.ನಂಜುಂಡಸ್ವಾಮಿ ಇದ್ದರು.