ಸಾಂದರ್ಭಿಕ ಚಿತ್ರ 
ಮೈಸೂರು

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮೈಸೂರಿನ ವ್ಯಕ್ತಿಗೆ 70 ಲಕ್ಷ ರೂ.ವಂಚನೆ

ಮೈಸೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಅಪರಿಚಿತ ಸೈಬರ್ ವಂಚಕರು ನಿವೃತ್ತ ವ್ಯಕ್ತಿಯೊಬ್ಬರನ್ನು ಬೆದರಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 70.77 ಲಕ್ಷ ರೂ.ಹಣ ವರ್ಗಾಯಿಸಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೈಸೂರು ನಗರದ ಸಿಇಎನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ.ನಗರದ ನಿವಾಸಿ ಕೆ. ಮಾಧವರಾವ್ ನೀಡಿದ ದೂರಿನ ಪ್ರಕಾರ, ಜು.3ರಂದು ಅಪರಿಚಿತ ವ್ಯಕ್ತಿಯೊಬ್ಬರು ತಮ್ಮನ್ನು ಟ್ರಾಯ್ ಅಧಿಕಾರಿಯೆಂದು ಪರಿಚಯಿಸಿಕೊಂಡು ಮೊಬೈಲ್ ಕರೆ ಮಾಡಿದ್ದರು. ನಿಮ್ಮ ಹೆಸರಿನಲ್ಲಿ ಮುಂಬೈನಲ್ಲಿ ಮತ್ತೊಂದು ಸಿಮ್ ಕಾರ್ಡ್ ನೋಂದಣಿಯಾಗಿದ್ದು, ಅದರ ವಿರುದ್ಧ ದೂರು ದಾಖಲಿಸಬೇಕೆಂದು ತಿಳಿಸಿದ್ದರು. ಬಳಿಕ ಮತ್ತೊಬ್ಬ ವ್ಯಕ್ತಿ ವಾಟ್ಸಾಪ್ ವಿಡಿಯೊ ಕರೆ ಮಾಡಿ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯೆಂದು ಹೇಳಿಕೊಂಡು, ಉದ್ಯಮಿ ನರೇಶ್ ಗೋಯಲ್ ಪ್ರಕರಣದಲ್ಲಿ ತಮ್ಮ ಹೆಸರು ಸೇರಿದ್ದು, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದೀರಿ ಎಂದು ಹೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಂಚಕರು, ಆಧಾರ್ ಹಾಗೂ ಬ್ಯಾಂಕ್ ದಾಖಲೆಗಳು ಅಪರಾಧ ಪ್ರಕರಣದಲ್ಲಿ ಪತ್ತೆಯಾಗಿವೆ ಎಂದು ನಂಬಿಸಿ, ಹಣಕಾಸು ಆಸ್ತಿಗಳನ್ನು ಪರಿಶೀಲಿಸಬೇಕೆಂದು ಹೇಳಿದ್ದರು. ಅಲ್ಲದೆ, ಡಿಜಿಟಲ್ ಅರೆಸ್ಟ್‌ನಲ್ಲಿ ಇದ್ದೀರಿ, ಈ ವಿಷಯವನ್ನು ಯಾರಿಗೂ ತಿಳಿಸಬಾರದು ಹಾಗೂ ನಿರಂತರ ವಿಡಿಯೊ ಕರೆಯಲ್ಲೇ ಇರಬೇಕು ಎಂದು ಸೂಚಿಸಿ, ಅವರ ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದರು.
ನಂತರ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್‌ನಲ್ಲಿದ್ದ ಸ್ಥಿರ ಠೇವಣಿಗಳನ್ನು ಉಳಿತಾಯ ಖಾತೆಗೆ ವರ್ಗಾಯಿಸಿಕೊಳ್ಳುವಂತೆ ಸೂಚಿಸಿ, ತಾವು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ಕಳುಹಿಸುವಂತೆ ಮಾಡಿದ್ದರು. ಅದರಂತೆ ವಿವಿಧ ದಿನಗಳಲ್ಲಿ ಐದು ವಹಿವಾಟುಗಳ ಒಟ್ಟು 70.77 ಲಕ್ಷ ರೂ. ಹಣವನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜು.28ರಂದು ಮತ್ತೆ ಹಣ ಕಳುಹಿಸುವಂತೆ ಒತ್ತಾಯಿಸಿದಾಗ ಅನುಮಾನಗೊಂಡ ಮಾಧವರಾವ್ ಈ ವಿಷಯವನ್ನು ಪುತ್ರನಿಗೆ ತಿಳಿಸಿದ್ದಾರೆ. ಬಳಿಕ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ ದೂರು ಸಲ್ಲಿಸಿ, ನಂತರ ನಗರದ ಅಪರಾಧ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.