ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಟಿ.ಎಸ್. ಶ್ರೀವತ್ಸ, ಸುಚರಿತಾ ಮಾತಾಜಿ, ಡಾ.ಪಿ.ಎನ್‌. ಗಣೇಶಕುಮಾರ್‌, ಡಾ.ಎಚ್.ಎ. ಶಶಿರೇಖಾ ಇದ್ದರು. 
ಮೈಸೂರು

ಆರೋಗ್ಯ ಕಾಪಾಡಿಸಿಕೊಳ್ಳಲು ಆಹಾರ, ಯೋಗ, ವ್ಯಾಯಾಮ ಮುಖ್ಯ- ಟಿ.ಎಸ್. ಶ್ರೀವತ್ಸ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಘಟಿಕೋತ್ಸವ
  • ಪದವಿ ಪ್ರದಾನ, ಸಾಧಕರಿಗೆ ಸನ್ಮಾನ

ಆರೋಗ್ಯ ಕಾಪಾಡಿಸಿಕೊಳ್ಳಲು ಆಹಾರ, ಯೋಗ, ವ್ಯಾಯಾಮ ಮುಖ್ಯ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಭಿಪ್ರಾಯಪಟ್ಟರು.

ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಘಟಿಕೋತ್ಸವ ಉದ್ಘಾಟಿಸಿ, ಪದವಿ ಪ್ರದಾನ ಮಾಡಿ ಅವರು ಮಾತನಾಡಿ, ನಾನು ಕೂಡ ಯೋಗ ಕಲಿಯಬೇಕು ಎಂಬ ಹಂಬಲ ಬಹಳ ದಿನದಿಂದ ಇತ್ತು. ಕಳೆದ ನಾಲ್ಕು ತಿಂಗಳಿಂದ ಯೋಗಾಭ್ಯಾಸದಲ್ಲಿ ತೊಡಗಿದ್ದೇನೆ. ಆರೋಗ್ಯಕ್ಕೆ ಆಹಾರದ ಜೊತೆಗೆ ನಡಿಗೆ, ಯೋಗ, ವ್ಯಾಯಾಮ ಅಗತ್ಯ ಎಂದರು.

ಯೋಗ ಎಂದರೇ ಮೈಸೂರು, ಮೈಸೂರು ಎಂದರೇ ಯೋಗ ಎಂಬಂತೆ ಪ್ರಸಿದ್ಧಿಯಾಗಿದೆ. ಇಲ್ಲಿ ಯೋಗ ಕಲಿತವರು ಬೇರೆ ಬೇರೆ ದೇಶಗಳಿಗೆ ಹೋಗಿ ಯೋಗ ಹೇಳಿಕೊಡುವ ಹಂತಕ್ಕೆ ತಲುಪಿದ್ದಾರೆ. ಇದಲ್ಲದೇ ಇಲ್ಲಿ ಸಂಗೀ, ಭರತನಾಟ್ಯ, ಆಗಮ, ವೇದಾಧ್ಯಯನ, ಅರ್ಚಕ- ಪೌರೋಹಿತ್ಯ ವೃತ್ತಿಗೆ ಬೇಕಾದ ಶಿಕ್ಷಣವನ್ನು ಕೂಡ ಕಲಿಸಲಾಗುತ್ತಿದೆ. ಯೋಗ ಮಾತ್ರವಲ್ಲದೇ ಉತ್ತರ ಕರ್ನಾಟಕದ ಭಾಗಗಳಿಂದಲೂ ಸುಮಾರು ಒಂದು ಸಾವಿರ ಮಂದಿ ಮೈಸೂರಿಗೆ ಬಂದು ವೇದಾಧ್ಯಯನ ಮಾಡುತ್ತಿದ್ದಾರೆ. ಸನಾತನ ಧರ್ಮ ನಶಿಸಿ ಹೋಗುತ್ತಿದೆ. ಅದನ್ನು ಯಾರೂ ಕಲಿಯಲು ಮುಂದಾಗುತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿ ಈ ರೀತಿಯ ಬೆಳವಣಿಗೆ ಶ್ಲಾಘನೀಯ ಎಂದರು.

ಆಧ್ಯಾತ್ಮಿಕ ಚಿಂತಕಿ ಸುಚರಿತಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ.ಪಿ.ಎನ್‌. ಗಣೇಶಕುಮಾರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಆರ್‌ಎಂಒ ಡಾ.ಎಚ್.. ಶಶಿರೇಖಾ ಪ್ರಧಾನ ಭಾಷಣ ಮಾಡಿದರು. ಎಂ.ವಿ. ಯೋಗಾಸ್‌ ಕಾರ್ಯದರ್ಶಿ ಭಾಸ್ಕರ್‌, ಹಿರಿಯ ಉಪಾಧ್ಯಕ್ಷ ದೇವಪ್ಪ, ಮೈಸೂರು ಯೋಗ ಒಕ್ಕೂಟದ ಯೋಗಕುಮಾರ್‌, ಶ್ರೀ ರಾಘವೇಂದ್ರ ಕೇಂದ್ರದ ಎನ್‌. ಪಶುಪತಿ ಮೊದಲಾದವರು ಇದ್ದರು.

ಪ್ರಶಸ್ತಿ ಪುರಸ್ಕೃತರು

ಇದೇ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ಉಮೇಶ್‌ ಗಣಪತಿ ಶೇಟ್‌, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್‌, ಐತಿಚಂಡ ರಮೇಶ್‌ ಉತ್ತಪ್ಪ, ನಿವೃತ್ತ ಡಿಡಿಪಿಐ ಮಂಜುಳಾ, ದುಬೈ ಯೋಗ ಶಿಕ್ಷಕಿ ಪಿ. ಭಾಗ್ಯಾ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಎಂ. ಮೋಹನ್‌- ರೇಖಾ ದಂಪತಿ, ಮಂಡ್ಯ ಸಹಾಯಕ ಜೇಲರ್‌ ಎಂ.ಎಸ್‌. ಕುಮಾರ್‌ ಗೀತಾ ದಂಪತಿ, ಯೋಗ ಪ್ರಚಾರಕ ವೆಂಕಟೇಶ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 70 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.