ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮುಂಜನಹಳ್ಳಿ ಗ್ರಾಮದ ಪಾರ್ವತಮ್ಮ ಅವರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾ ಮತ್ತು ತಾಲೂಕು ಯೋಜನಾಧಿಕಾರಿ ಕೆ ಸದಾನಂದ ಅವರು ಮನೆ ಹಸ್ತಾಂತರ ಮಾಡಿದರು.
- ಜಿಲ್ಲಾ ನಿರ್ದೇಶಕಿ ಮಮತಾ ಅಭಿಮತ
- ನಿರ್ಗತಿಕ ಕುಟುಂಬಕ್ಕೆ ಮನೆ ಹಸ್ತಾಂತರ
ಸಾಲಿಗ್ರಾಮ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಲ ಕೊಟ್ಟು ಸಾಲ ವಸೂಲಾತಿಗೆ ಮಾತ್ರ ಸೀಮಿತವಲ್ಲ. ನಿರ್ಗತಿಕರು, ಬಡವರ ಬದುಕು ಕಟ್ಟಲು ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತಹ ಬಡವರ ಆಶಾಕಿರಣ ಸಂಘ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತಾ ತಿಳಿಸಿದರು.
ಮುಂಜನಹಳ್ಳಿ ಗ್ರಾಮದಲ್ಲಿ ನಿರ್ಗತಿಕ ಬಡ ಕುಟುಂಬ ಒಂದಕ್ಕೆ ವಾಸದ ಮನೆ ನಿರ್ಮಾಣ ಮಾಡಿ ಗೃಹಪ್ರವೇಶ ಮಾಡುವ ಮೂಲಕ ಮಂಗಳವಾರ ಹಸ್ತಾಂತರ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನತೆಯಿಂದ ಬದುಕು ನಡೆಸಬೇಕು. ಅದಕ್ಕಾಗಿ ಉದ್ಯೋಗ ಕಲ್ಪಿಸಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕು, ಗ್ರಾಮಗಳಲ್ಲೂ ಬಡವರು ಮತ್ತು ನಿರ್ಗತಿಕ ಜನರಿಗೆ ನೆರವಾಗುವ ಮೂಲಕ ಕೆಲಸ ಮಾಡುತ್ತಿದೆ. ಇದನ್ನು ಪ್ರತಿಯೊಬ್ಬರೂ ಸದಾ ಉಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಂಜನಹಳ್ಳಿ ಗ್ರಾಮದಲ್ಲಿ ಪಾರ್ವತಮ್ಮ ಎಂಬ ಮಹಿಳೆ ಜೀವನ ಸಾಗಿಸಲು, ವಾಸ ಮಾಡಲು ಮನೆಯೂ ಇಲ್ಲದೆ ಕಷ್ಟಪಡುತ್ತಿರುವ ಮಾಹಿತಿ ನಮ್ಮ ಸಂಘದ ಮೇಲ್ವಿಚಾರಕರ ಗಮನಕ್ಕೆ ಬಂದ ಕೂಡಲೇ ಪೂಜ್ಯರ ಗಮನಕ್ಕೆ ತಂದು ಅವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಇಂದು ಗೃಹಪ್ರವೇಶ ಮಾಡಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಹೊಸ ಮನೆಯನ್ನು ಹಸ್ತಾಂತರ ಮಾಡಲಾಗುತ್ತಿದೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೈಗೊಂಡಿರುವ ಕೆಲಸ, ಕಾರ್ಯಗಳನ್ನು ಸರ್ಕಾರವೇ ಮೆಚ್ಚುವಂತಿದೆ. ಬಡ ಕುಟುಂಬಗಳಿಗೆ ಸಾಲ ಸೌಲಭ್ಯ ಕೊಡಿಸುವುದರ ಜತೆಗೆ ನಿರ್ಗತಿಕ ಕುಟುಂಬದ ಸದಸ್ಯರಿಗೆ ತಿಂಗಳಿಗೆ ಪಿಂಚಣಿ ಮತ್ತು ಆಶ್ರಯ ಮನೆ ಹಾಗೂ ಅವರಿಗೆ ಆಹಾರ ಪದಾರ್ಥ ಮತ್ತು ಬಟ್ಟೆಗಳನ್ನು ಒದಗಿಸಿಕೊಡುವ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ.ಸದಾನಂದ, ವಿಸ್ತರಣಾ ಅಧಿಕಾರಿ ಮಹದೇವಸ್ವಾಮಿ, ಮೇಲ್ವಿಚಾರಕ ಸೋಮಶೇಖರ್, ಸೇವಾ ಪ್ರತಿನಿಧಿ ಗೌರಿ, ರೇಖಾ, ಶಶಿಕಲಾ, ಮೋಹನ್ ಕುಮಾರಿ, ಕಂಪ್ಯೂಟರ್ ಆಪರೇಟರ್ ರಶಿ,್ಮ ಶೈಲಜಾ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೋಭಾ, ಯಜಮಾನ ಸ್ವಾಮಿಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.