ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ಸೇವಾಧರ್ಮ ಕಾರ್ಯಾಗಾರವನ್ನು ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಿದರು. ಎಚ್.ವಿ.ರಾಜೀವ್, ಎಸ್.ಎಸ್.ಅನಿಲ್ ಕುಮಾರ್, ಬಿ.ಕೆ.ಬಸವರಾಜು, ನಂದಕುಮಾರ್, ಅಂಶಿ ಪ್ರಸನ್ನಕುಮಾರ್, ಹಂದನಹಳ್ಳಿ ಸೋಮಶೇಖರ್, ಪುರುಷೋತ್ತಮ್, ವಿಜಯಕುಮಾರ್ ನಾಗನಾಳ್, ಯೋಗೇಶ್ ಇತರರು ಇದ್ದರು.
- ಸರ್ಕಾರವೂ ಮಾಡಲಾಗದ ಸಾಮಾಜಿಕ ಕಾರ್ಯಕ್ರಮಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ
- ಕಾನೂನುಬಾಹಿರವಾದ ಯಾವುದೇ ಕೃತ್ಯಗಳು ಗಮನಕ್ಕೆ ಬಂದಾಗ ಪೊಲೀಸರಿಗೆ ತಿಳಿಸಿದರೆ, ತಡೆಯಲು ಅನುಕೂಲವಾಗುತ್ತದೆ
ಸರ್ಕಾರವೂ ಮಾಡಲಾಗದ ಸಾಮಾಜಿಕ ಕಾರ್ಯಕ್ರಮಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ವಿಜಯನಗರದ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸೇವಾ ಧರ್ಮ ಕಾರ್ಯಾಗಾರದಲ್ಲಿ ಮಾತನಾಡಿದರು. ನಿಸ್ವಾರ್ಥದಿಂದ ಸೇವೆ ಮಾಡುತ್ತಾ, ರಾಜ್ಯದ ಎಲ್ಲ ವರ್ಗದ ಬಡವರು ಸ್ವಾಭಿಮಾನದಿಂದ ಬದುಕುವಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಸರ್ಕಾರ ಕೂಡ ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಎಲ್ಲವನ್ನೂ ಸರ್ಕಾರವೇ ಮಾಡಲಾಗುವುದಿಲ್ಲ. ಸರ್ಕಾರವೂ ಮಾಡಲಾಗದ ಕಾರ್ಯಕ್ರಮಗಳನ್ನು ಟ್ರಸ್ಟ್ ಮೂಲಕ ಮಾಡಲಾಗುತ್ತಿದೆ ಎಂದರು.
ಪರಿಸರ ಸಮತೋಲನಕ್ಕಾಗಿ ಗಿಡ ನೆಡುವ ಕಾರ್ಯಕ್ರಮ, ಕೆರೆಗಳು ಹಾಗೂ ದೇವಸ್ಥಾನಗಳ ಪುನರುಜ್ಜೀವನ, ಮದ್ಯವರ್ಜನ ಶಿಬಿರ, ಅಶಕ್ತರ ಮನೆಬಾಗಿಲಿಗೆ ಪಿಂಚಣಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಪೂಜ್ಯರು ಮಾನವೀಯ ಹೃದಯದಿಂದ ರೂಪಿಸಿ, ಜನರಿಗೆ ನೆರವಾಗಿದ್ದಾರೆ ಎಂದರು.
ಧರ್ಮಸ್ಥಳ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ರೂಪಿಸಿರುವ ಕಾರ್ಯಕ್ರಮಗಳನ್ನು ಕಣ್ಣಾರೆ ಕಂಡು ನೆರೆ ರಾಜ್ಯಗಳಲ್ಲಿಯೂ ಇಂತಹ ಕಾರ್ಯಕ್ರಮ ರೂಪಿಸುವಂತೆ ಕೋರಿಕೆ ಬಂದಿದ್ದವು. ಆದರೆ ಧರ್ಮಾಧಿಕಾರಿಗಳು, ರಾಜ್ಯದಲ್ಲಿಯೇ ಇನ್ನು ಸಾಕಷ್ಟು ಕೆಲಸಗಳು ಇವೆ. ಹಾಗಾಗಿ ಆಯಾ ರಾಜ್ಯಗಳೇ ನಮ್ಮ ಯೋಜನೆಗಳನ್ನು ಮಾಡಲಿ ಎಂದು ನಮ್ಮ ರಾಜ್ಯಕ್ಕೆ ಸೀಮಿತವಾಗಿ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಡ್ರಗ್ಸ್ ಮುಕ್ತ ದೇಶ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ತಡೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಎಲ್ಲ ಮಾಹಿತಿ ಇರುತ್ತದೆ. ಆದ್ದರಿಂದ ಕಾನೂನುಬಾಹಿರವಾದ ಯಾವುದೇ ಕೃತ್ಯಗಳು ಗಮನಕ್ಕೆ ಬಂದಾಗ ಪೊಲೀಸರಿಗೆ ತಿಳಿಸಿದರೆ, ತಡೆಯಲು ಅನುಕೂಲವಾಗುತ್ತದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಸ್.ಎಸ್.ಅನಿಲ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಕೆ.ಬಸವರಾಜು, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್ ಇತರರು ಇದ್ದರು.
ಟ್ರಸ್ಟ್ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್, ಪ್ರಾದೇಶಿಕ ನಿರ್ದೇಶಕ ಯೋಗೇಶ್ ವಿವಿಧ ಯೋಜನೆಗಳ ವಿವರ ನೀಡಿ, ಮೈಸೂರು ಜಿಲ್ಲೆಯಲ್ಲಿ 15 ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮಾಭಿವೃದ್ಧಿ ಯೋಜನೆಯಡಿ 31,780 ಸ್ವಸಹಾಯ ಸಂಘಗಳಿದ್ದು, 3,06,050 ಪಾಲುದಾರ ಬಂಧುಗಳಿದ್ದಾರೆ. ಟ್ರಸ್ಟ್ ಮೂಲಕ ಕೆರೆ ಅಭಿವೃದ್ಧಿ, ಸುಜ್ಞಾನನಿಧಿ, ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ನೇಮಕಾತಿ, ನಿರ್ಗತಿಕರಿಗೆ ಮಾಸಾಶನ, ವಾತ್ಸಲ್ಯ ಮನೆ ನಿರ್ಮಾಣ, ಮದ್ಯವರ್ಜನ ಶಿಬಿರ, ಆರ್ಥಿಕ ಸಹಕಾರ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮೊದಲಾದ ಸಮಾಜಮುಖಿ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.