ಬೋಧ್ ಗಯಾ ಬುದ್ಧವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಿ ಮೈಸೂರು ನಗರದಲ್ಲಿ ಗುರುವಾರ ಧಮ್ಮನಡಿಗೆ ನಡೆಯಿತು. 
ಮೈಸೂರು

ಮೈಸೂರಿನಲ್ಲಿ ಬೋಧ್ ಗಯಾ ಬುದ್ಧವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ಧಮ್ಮ ನಡಿಗೆ

ಮೈಸೂರು: ಬೋಧ್ ಗಯಾ ಬುದ್ಧವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘಟನೆಗಳ ವತಿಯಿಂದ ಧಮ್ಮನಡಿಗೆ ಗುರುವಾರ ನಗರದಲ್ಲಿ ನಡೆಯಿತು.
ಭಾರತೀಯ ವಿದ್ಯಾರ್ಥಿ ಸಂಘ, ಬೆಸ್ಟ್, ಪದ್ಮಪಾಣಿ ಲಲಿತಕಲಾ ಅಕಾಡೆಮಿ, ವಿಶ್ವಮೈತ್ರಿ ಬುದ್ಧ ವಿಹಾರ, ನವಯಾನ ಚಾರಿಟಬಲ್ ಟ್ರಸ್ಟ್, ಬುದ್ಧ ಬಳಗ, ಬೋಧಿವೃಕ್ಷ, ಬುದ್ಧದಮ್ಮ ಸಮಿತಿ, ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಧಮ್ಮದೀಪ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಧಮ್ಮ ನಡಿಗೆಯು ನಗರದ ಪುರಭವನ ಆವರಣದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಅಂತ್ಯಗೊಂಡಿತು.
ಸಾಮ್ರಾಟ್ ಅಶೋಕ ತನ್ನ ಸಾಮ್ರಾಜ್ಯದ ಉದ್ದಗಲಕ್ಕೂ ಸ್ಥಾಪಿಸಿದ 84 ಸಾವಿರ ಸ್ತೂಪಗಳ ಪೈಕಿ ಬುದ್ಧಗಯಾ ಮಹಾವಿಹಾರವು ಒಂದಾಗಿದ್ದು, ಬೌದ್ಧರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಸಾವಿರಾರು ವರ್ಷಗಳ ಕಾಲ ಬೌದ್ಧರ ಆಡಳಿತದಲ್ಲಿದ್ದ ಬುದ್ಧಗಯಾದ ಮಹಾಬೋಧಿ ಮಹಾವಿಹಾರವು 1919ರ ನಂತರ ಅನ್ಯ ಧರ್ಮೀಯರ ಆಡಳಿತದ ಹಿಡಿತದಲ್ಲಿದೆ. ಅದನ್ನು ರದ್ದುಪಡಿಸಿ ಬೌದ್ಧರ ಆಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸಲಾಯಿತು.