ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಕ್ಷೇತ್ರದ ಎರಡು ವಾರ್ಡ್‌ಗಳಲ್ಲಿ ಒಟ್ಟು ₹2.54 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. 
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ ₹2.54 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಗೋಕುಲಂ, ವಿ.ವಿ. ಮೊಹಲ್ಲಾದಲ್ಲಿ ರಸ್ತೆ, ಚರಂಡಿ ಹಾಗೂ ಫುಟ್‌ಪಾತ್ ಅಭಿವೃದ್ಧಿಗೆ ಗುದ್ದಲಿ ಪೂಜೆ

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಕ್ಷೇತ್ರದ ಎರಡು ವಾರ್ಡ್‌ಗಳಲ್ಲಿ ಒಟ್ಟು ₹2.54 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-4 ವ್ಯಾಪ್ತಿಯ ಗೋಕುಲಂ ವಾರ್ಡ್ ನಂ.6ರಲ್ಲಿ ನಗರಪಾಲಿಕೆ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗೋಕುಲಂ ಕಾಂಟೂರ್ ರಸ್ತೆಯ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಯಿಂದ 1ನೇ ಮುಖ್ಯ ರಸ್ತೆಯ ಡಾ. ಪುನೀತ್ ರಾಜ್‌ಕುಮಾರ್ ವೃತ್ತದವರೆಗೆ ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.

ವಿ.ವಿ. ಮೊಹಲ್ಲಾದಲ್ಲಿ ₹54 ಲಕ್ಷ ಕಾಮಗಾರಿ:

ವಲಯ ಕಚೇರಿ-4 ವ್ಯಾಪ್ತಿಯ ವಿ.ವಿ. ಮೊಹಲ್ಲಾ ವಾರ್ಡ್ ನಂ.19ರಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ₹54 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ನಳಪಾಕ್ ಹೋಟೆಲ್‌ನಿಂದ ಆದಿಪಂಪ ರಸ್ತೆವರೆಗೆ ಹಾಗೂ ಅಡ್ಡರಸ್ತೆಗಳಲ್ಲಿ ಚರಂಡಿ ಮತ್ತು ಫುಟ್‌ಪಾತ್ ಅಭಿವೃದ್ಧಿಪಡಿಸಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ಹರೀಶ್ ಗೌಡ, “ಚಾಮರಾಜ ಕ್ಷೇತ್ರದ ಪ್ರತಿ ರಸ್ತೆಯೂ ಉತ್ತಮವಾಗಬೇಕು. ಜನರ ಮೂಲಭೂತ ಸೌಕರ್ಯವೇ ನನ್ನ ಆದ್ಯತೆ. ಕಾಮಗಾರಿಗಳನ್ನು ಶೀಘ್ರವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಮಾಯಮ್ಮ, ವಾರ್ಡ್ ಅಧ್ಯಕ್ಷರಾದ ದಿನೇಶ್, ಜಯಪ್ರಕಾಶ್, ಗಿರಿಜಾಂಬ, ಗಾಯತ್ರಿ ನಾರಾಯಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್, ಮುಖಂಡರಾದ ಸುಶೀಲ ಮರೀಗೌಡ, ಲಾಯರ್ ಶ್ರೀನಿವಾಸ್, ಟೆಂಟ್ ಶ್ರೀನಿವಾಸ್, ಬಸವರಾಜು, ರೇಖಮ್ಮ, ಲಕ್ಷ್ಮೀ ಶಿವರಾಜು, ಇಮಾಂಶು, ಮಾಜಿ ನಗರಪಾಲಿಕೆ ಸದಸ್ಯರಾದ ರಮೇಶ್, ಮೋಹನ್, ತೇಜಸ್ ಗೌಡ ಸೇರಿದಂತೆ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.