ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿ ಪೂಜೆ ನೆರವೇರಿಸಿದರು. ಆರ್.ಚಲುವರಾಜು, ಮುನಾವರ್ ಪಾಷ, ವೀಣಾ ಶಿವಕುಮಾರ್, ಎ.ಎನ್.ಮಹೇಶ್, ಡಿ.ಸುನೀಲ್ ಕುಮಾರ್ ಇತರರು ಇದ್ದರು.
ತಿ.ನರಸೀಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ನೀಡಿದ್ದು, ಮುಖ್ಯಮಂತ್ರಿಗಳ ಮೂಲಸೌಕರ್ಯ ನಿಧಿಯಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ಮಂಗಳವಾರ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಅದರಲ್ಲಿ ಈವರೆಗೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 38.50 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಂದು ಲೋಕೋಪಯೋಗಿ ಇಲಾಖೆಯ 11 ಕೋಟಿ, ಪಂಚಾಯತ್ ರಾಜ್ ಇಲಾಖೆಯ 1.10 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಪೈಕಿ ಎಸ್‌ಸಿಪಿಗೆ 1.10 ಕೋಟಿ ಹಾಗೂ ಸಾಮಾನ್ಯ ವರ್ಗದ ಕಾಲನಿ ಅಭಿವೃದ್ಧಿಗೆ 3.55. ಕೋಟಿ ರೂ. ಒಟ್ಟಾರೆ 14.55 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಆರ್.ಚಲುವರಾಜು ಮಾತನಾಡಿ, ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 300 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಈ ಬಾರಿ ಎಸ್‌ಸಿಪಿ, ಟಿಎಸ್‌ಪಿ ಮತ್ತು ಹಾಗೂ ಜನರಲ್ ವಾರ್ಡ್ ಗಳಲ್ಲಿ ರಸ್ತೆ , ಚರಂಡಿಗಳು ಕಾಮಗಾರಿಗಳು ಆರಂಭವಾಗಿವೆ. ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಅವರು ಕ್ಷೇತ್ರವಾರು ಪ್ರವಾಸ ಕೈಗೊಂಡು ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಸಿದ್ದರಾಮ, ಸೋಸಲೆ ಮಹದೇವಸ್ವಾಮಿ, ಎಂ.ಪರಶಿವಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಮಾಜಿ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಆಪ್ತ ಸಹಾಯಕ ಬಿ.ಬಸವರಾಜು, ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಕೆ.ಎಂ. ಮಧುಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ಎ.ಎನ್ .ಸ್ವಾಮಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಎಂ.ಶಶಿಭೂಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬೃಂದಾ ಕೃಷ್ಣೇಗೌಡ ಇತರರು ಇದ್ದರು.