ಎಚ್.ಡಿ.ಕೋಟೆ ಪುರಸಭೆ 
ಮೈಸೂರು

ಎಚ್.ಡಿ.ಕೋಟೆ ಪಟ್ಟಣದಲ್ಲಿ ಅಭಿವೃದ್ಧಿಗೆ ಹಿನ್ನಡೆ

ಪ್ರಮುಖ ಮುಖ್ಯಾಂಶಗಳು

  • ಪುರಸಭೆಯಲ್ಲಿ ಹಳಿ ತಪ್ಪಿದ ಆಡಳಿತ
  • ಮುಖ್ಯಾಧಿಕಾರಿ ಇಲ್ಲ, ಆಡಳಿತ ಮಂಡಳಿಯೂ ಇಲ್ಲ
ಎಚ್.ಡಿ.ಕೋಟೆ: ಬಡಾವಣೆಗಳಿಗೆ ಕುಡಿಯಲು ಶುದ್ಧ ನೀರಿಲ್ಲ, ಚರಂಡಿ ಸ್ವಚ್ಛತೆ ಇಲ್ಲ, ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ನೀಡಿಲ್ಲ, ಪುರಸಭಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸಿಬ್ಬಂದಿಗೆ ಸಹನೆ ಇಲ್ಲ, ತೆರಿಗೆ ವಸೂಲಾತಿ ಇಲ್ಲ, ಕಾಮಗಾರಿ ಉಸ್ತುವಾರಿ ನೋಡಲು ಇಂಜಿನಿಯರ್ ಇಲ್ಲ, ಮನೆಗಳಿಗೆ ಬಿಲ್ ಪಾವತಿ ಆಗಿಲ್ಲ, ಪುರಸಭಾ ಮುಖ್ಯಾಧಿಕಾರಿ ಹೆಸರಿಗೆ ಮಾತ್ರ ಕೆಲಸ ನಿರ್ವಹಣೆ... ಒಟ್ಟಾರೆ ಇಲ್ಲಗಳ ನಡುವೆ ಎಚ್.ಡಿ.ಕೋಟೆ ಪುರಸಭೆ ನರಳುತ್ತಿದೆ...!
ಹೆಸರಿಗೆ ಮಾತ್ರ ಪುರಸಭೆ ಆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವಂತಹ ಕೆಲಸ ಕಾರ್ಯಗಳೂ ನಡೆಯುತ್ತಿಲ್ಲ. ಇದಕ್ಕೆ ಪಟ್ಟಣದಲ್ಲಿ ತಾಂಡವವಾಡುತ್ತಿರು ಸಮಸ್ಯೆಗಳೇ ನೇರ ಸಾಕ್ಷಿ. ವನಸಿರಿ ನಾಡು, ಜಲಾಶಯಗಳ ಬೀಡು ಎಂಬ ಖ್ಯಾತಿ ಪಡೆದ ಹೆಗ್ಗಡದೇವನಕೋಟೆ ಪುರಸಭೆ ಅಭಿವೃದ್ಧಿಯಲ್ಲಿ ಮಾತ್ರ ಹಿಂದೆ. 23 ವಾರ್ಡ್‌ಗಳು ಇದ್ದು ಬಹುತೇಕ ಎಸ್ಸಿ-ಎಸ್ಟಿ ಸಮುದಾಯ ಹೆಚ್ಚು ವಾಸ ಮಾಡುವ ಪುರಸಭೆ ಇದಾಗಿದೆ. ಸರ್ಕಾರದಿಂದ ಪಟ್ಟಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾದರೂ ಕೂಡ ಅದು ಸಮರ್ಪಕವಾಗಿ ಬಳಕೆ ಆಗದೆ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆ ಆಗಿದೆ.
ಈಗಾಗಲೇ ಚುನಾಯಿತ ಜನಪ್ರತಿನಿಧಿಗಳ ಅಧಿಕಾರಾವಧಿ ನ.8ಕ್ಕೆ ಮುಕ್ತಾಯವಾಗಿದ್ದು, ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಜೋಡೆತ್ತಿನ ರೀತಿಯಲ್ಲಿ ಸಮಬಲವಾಗಿ ಅಧಿಕಾರವನ್ನು ಕೊಂಡೊಯ್ಯದಿರುವುದೇ ಅಭಿವೃದ್ಧಿ ಶೂನ್ಯವಾಗಲು ಕಾರಣ ಎನ್ನಬಹುದು. 5 ವರ್ಷದ ಅವಧಿಗೆ ಚುನಾಯಿತರಾದ ಜನಪ್ರತಿನಿಧಿಗಳಿಗೆ ಮತ್ತೆ 3 ವರ್ಷ ಹೆಚ್ಚುವರಿಯಾಗಿ ಅಧಿಕಾರ ಸಿಕ್ಕರೂ ಹೇಳಿಕೊಳ್ಳುವಂತ ಅಭಿವೃದ್ಧಿ ಮಾಡಲು ಸಾಧ್ಯ ಆಗಿಲ್ಲ.
ಎರಡು ತಿಂಗಳ ಹಿಂದೆ ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ಅವರು ಕರ್ತವ್ಯ ಲೋಪದ ಅಡಿಯಲ್ಲಿ ಸೇವೆಯಿಂದ ಅಮಾನತು ಆದ ನಂತರ ಒಂದು ತಿಂಗಳ ಕಾಲ ಪುರಸಭೆಗೆ ಅಧಿಕಾರಿಯನ್ನು ನಿಯೋಜನೆ ಮಾಡಲಿಲ್ಲ. ಈಗ 15 ದಿನದ ಹಿಂದೆ ಸರಗೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ್ ಅವರನ್ನು ಪ್ರಭಾರ ಮುಖ್ಯಾಧಿಕಾರಿಯಾಗಿ ಸರ್ಕಾರ ನಿಯೋಜನೆ ಮಾಡಿದೆ. ಆದರೆ ಅವರು ಹೆಸರಿಗೆ ಮಾತ್ರ ಮುಖ್ಯಾಧಿಕಾರಿಯೇ ಹೊರತು ಯಾವುದೇ ಅಧಿಕಾರ ಇರಲ್ಲ. ವಾರಕ್ಕೆ ಎರಡು ದಿನ ಬಂದು ಕಚೇರಿಯಲ್ಲಿ ಕುಳಿತು ಹೋಗುವ ಪರಿಸ್ಥಿತಿ. ಒಂದೂವರೆ ತಿಂಗಳು ಕಳೆದರು ಕೂಡ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹೆಸರಿನ ಡಿಜಿಟಲ್ ಕೀ ಇರುವ ಕಾರಣ ಈಗಿನ ಪ್ರಬಾರ ಮುಖ್ಯಾಧಿಕಾರಿ ಯಾವುದೇ ಅಧಿಕಾರ ಚಲಾಯಿಸಲು ಸಾಧ್ಯ ಆಗಿಲ್ಲ. ಇದರಿಂದ ಕಳೆದ ಮೂರು ನಾಲ್ಕು ತಿಂಗಳಿಂದ ಗುತ್ತಿಗೆ ಪೌರ ಕಾರ್ಮಿಕರಿಗೆ ಹಾಗೂ ವಾಟರ್‌ಮನ್‌ಗಳಿಗೆ ಸಂಬಳ ನೀಡಲು ಸಾಧ್ಯವಾಗಿಲ್ಲ.
ತಾಲೂಕಿನಿಂದ ದೂರದ ನಗರಗಳಿಗೆ ಕಬಿನಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ನೀರೆತ್ತುವ ಮೋಟಾರ್ ರಿಪೇರಿ ನೆಪ ಹೇಳಿಕೊಂಡು ಸಮೀಪದಲ್ಲೇ ಇರುವ ಎಚ್.ಡಿ.ಕೋಟೆ ಪಟ್ಟಣಕ್ಕೆ ಕಳೆದ ಒಂದು ತಿಂಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಹಾಗಾಗಿ ಪಟ್ಟಣದ ಜನರು ಕ್ಲೋರೈಡ್ ಮಿಶ್ರಿತ ಬೋರ್‌ವೆಲ್ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಹಲವರು ರೋಗಬಾಧೆಗೆ ಒಳಗಾಗುತ್ತಿದ್ದಾರೆ. ಈ ವಿಚಾರ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸರಿಪಡಿಸುವ ಗೋಜಿಗೆ ಮುಂದಾಗಿಲ್ಲ.
ಸಾರ್ವಜನಿಕರಿಗೆ ಸ್ಪಂದಿಸದ ಸಿಬ್ಬಂದಿ
ಪುರಸಭೆಯಲ್ಲಿ ಆಡಳಿತ ಅಧಿಕಾರಿ ಇಲ್ಲದೆ ಇರುವುದರಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಸಾರ್ವಜನಿಕರು ಮಾತನಾಡಿಸುವುದೇ ಕಷ್ಟವಾಗಿದೆ. ಯಾವ ಸಿಬ್ಬಂದಿ ಕೂಡ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ಕಚೇರಿಗೆ ತಮಗೆ ಇಷ್ಟ ಬಂದ ಸಮಯಕ್ಕೆ ಬರುತ್ತಾರೆ, ಹೋಗುತ್ತಾರೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಎರಡು-ಮೂರು ತಿಂಗಳಿಂದ ಅರ್ಜಿ ಹಾಕಿ ಅಲೆದಾಡಿದರೂ ತಮ್ಮ ಕೆಲಸ ಆಗದೆ ಇರುವ ಕಾರಣ ಪುರಸಭಾ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿ ಪೌರಕಾರ್ಮಿಕರು
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಮತ್ತು ವಾಟರ್‌ಮನ್‌ಗಳಿಗೆ ಮೂರು, ನಾಲ್ಕು ತಿಂಗಳಿಂದ ವೇತನ ನೀಡದೆ ಇರುವುದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ನೌಕರರು ಕೆಲಸ ಮಾಡಲು ಸಾಧ್ಯವಾಗದೆ ಕೆಲಸ ಬಿಡಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇದರಿಂದ ಪಟ್ಟಣದ ಸ್ವಚ್ಛತೆ ಮತ್ತು ನಿರ್ವಹಣೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಒಟ್ಟಾರೆ ಎಚ್.ಡಿ.ಕೋಟೆ ಪಟ್ಟಣ ಪುರಸಭೆ ಎಂದು ಹೇಳಿಕೊಳ್ಳಲು ಇಲ್ಲಿರುವ ನಾಗರಿಕರಿಗೆ ಮುಜುಗರ ಉಂಟಾಗುತ್ತಿರುವುದು ಮಾತ್ರ ಸತ್ಯ. ಹಾಗಾಗಿ, ಸ್ಥಳೀಯ ಶಾಸಕರು ಪುರಸಭೆಗೆ ಒಬ್ಬ ಉತ್ತಮ ಅರ್ಹತೆ ಇರುವ ಮುಖ್ಯಾಧಿಕಾರಿ ನೇಮಕಾತಿ ಮಾಡಲು ಮುಂದಾಗಬೇಕು, ಪಟ್ಟಣದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂಬುದು ಸಾರ್ವಜನಿಕರ ಆಶಯ.
ತೆರಿಗೆ ಸಂಗ್ರಹ ಇಲ್ಲ, ಆದಾಯವೂ ಕಡಿತ
ಎರಡು ತಿಂಗಳಿಂದ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿ ಇಲ್ಲದೆ ಇರುವುದರಿಂದ ಪಟ್ಟಣದಲ್ಲಿ ತೆರಿಗೆ ವಸೂಲಾತಿ ಮಾಡುವವರೇ ಇಲ್ಲವಾಗಿದೆ. ಇದರಿಂದ ಪುರಸಭೆಗೆ ಬರಬೇಕಾದ ಆದಾಯ ಕಡಿತಗೊಂಡಿದ್ದು ಪಟ್ಟಣದ ಅಭಿವೃದ್ಧಿಗೆ ಇದು ಕೂಡ ಕಾರಣವಾಗಿದೆ. ರಾಜೀವ್‌ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ಆರು ವರ್ಷಗಳಿಂದ ಬಿಲ್ ಪಾವತಿ ಆಗದೆ ಇರುವುದರಿಂದ ಸಾಲ ಮಾಡಿ ಮನೆ ಕಟ್ಟಿದ ಫಲಾನುಭವಿಗಳು ಮಾಡಿದ ಸಾಲ ತೀರಿಸಲು ಮನೆಯನ್ನು ಅಡಮಾನ ಇಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ಮನೆ ಮಂಜೂರು ಮಾಡಿತು ಎಂದು ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಇನ್ನೂ ಎರಡು ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ ಪುರಸಭೆಯಲ್ಲಿ ಇಂಜಿನಿಯರ್ ಇಲ್ಲದೆ ಇರುವುದರಿಂದ ಗುತ್ತಿಗೆದಾರರಿಗೆ ಅನುಮತಿ ನೀಡದೆ ಇರುವ ಕಾರಣಕ್ಕೆ ಸರ್ಕಾರದಿಂದ ಬಿಡುಗಡೆ ಆದ ಎರಡು ಕೋಟಿ ರೂ. ಹಾಗೇ ಉಳಿದಿದೆ.