ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ವಡ್ಡರ ಕೊಪ್ಪಲು ಗ್ರಾಮದ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ಯೋಗೀಶ್, ಸಿ.ಕೆ.ಬಾಲಮನೋಹರ, ಎಸ್.ಬಿ.ಶೇಖರ್, ಎಂ.ಬಿ.ಲೋಕನಾಥ್, ಶಕುಂತಲಾ, ಮಮತಾ, ಕವಿತಾ, ಮೋಹನ್ ಇತರರು ಇದ್ದರು.
ಸಾಲಿಗ್ರಾಮ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 15 ಕೋಟಿ ರೂ. ಅನುದಾನದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕ ಯೋಗೀಶ್ ಮಾಹಿತಿ ನೀಡಿದರು.
ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನರಚನಹಳ್ಳಿ ಗ್ರಾಮ ಪಂಚಾಯಿತಿ, ನರಸಿಂಹ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ‘ನಮ್ಮೂರು ನಮ್ಮ ಕೆರೆ’ಯೋಜನೆಯಡಿ ಒಟ್ಟು 9,62,000 ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಯೋಜನೆಯ 972ನೇ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿ 35 ಕೆರೆಗಳು ಹಾಗೂ ಕೃಷ್ಣರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ 17 ಕೆರೆಗಳ ಹೊಳೆತ್ತುವ ಕಾರ್ಯ ಮಾಡಲಾಗಿದೆ. ನೀರಿನ ಸಂರಕ್ಷಣೆಯನ್ನು ಸರ್ವರೂ ಮಾಡಬೇಕಾಗಿದೆ. ಕೆರೆಗಳಲ್ಲಿ ಹೊಳೆತ್ತುವ ಕೆಲಸ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಬಂದಾಗ ಮಾತ್ರ ಎಲ್ಲರಿಗೂ ಕೆರೆಕಟ್ಟೆ ನೆನಪಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿರುವ ಕೆರೆಯನ್ನು ಗ್ರಾಮಸ್ಥರು ಉತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಓ ರವಿಕುಮಾರ್ ಮಾತನಾಡಿ, ನೀರು ಮನುಷ್ಯನಿಗೆ ಮಾತ್ರವಲ್ಲದೆ, ಸಕಲ ಜೀವಿಗಳಿಗೂ ಅವಶ್ಯವಾಗಿದೆ. ಕೆರೆಯಲ್ಲಿ ನೀರು ಸಮೃದ್ಧಿಯಾಗಿದ್ದರೆ ಇಡೀ ಪರಿಸರವೇ ಸಮೃದ್ಧವಾಗಿರುತ್ತದೆ ಎಂಬ ಭಾವನೆ ಹಿಂದಿನಿಂದಲೂ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಪಾಠವಾಗಿದೆ ಎಂದರು.
ಕೆರೆ ಕೇವಲ ನೀರು ನಿಲ್ಲುವ ಜಾಗವಲ್ಲ, ಅದು ನಮ್ಮ ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಜನರ ಅವಿಭಾಜ್ಯ ಅಂಗ. ಕೆರೆಗಳನ್ನು ಕಟ್ಟುವಂತಹ ಪುಣ್ಯದ ಕೆಲಸವನ್ನು ನಮ್ಮ ಪುರ್ವಜರು ಮಾಡಿ ಹೋಗಿದ್ದಾರೆ. ಅವುಗಳನ್ನು ಉಳಿಸಿಕೊಳ್ಳಬೇಕಾದ ಕೆಲಸ ಎಲ್ಲರೂ ಮಾಡಬೇಕು ಎಂದು ತಿಳಿಸಿದರು.
ಸಾಲಿಗ್ರಾಮ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ರಾಜ್ಯಾದ್ಯಂತ ರೈತರು ಮತ್ತು ಬಡ ಜನರ ಅಭಿವೃದ್ಧಿಗೆ ಸಾಲ ಸೌಲಭ್ಯ, ಸ್ವ-ಉದ್ಯೋಗ ತರಬೇತಿ, ಉಚಿತ ಶಿಕ್ಷಣ, ಕೆರೆಗಳ ಅಭಿವೃದ್ಧಿ, ಅಸಹಾಯಕ ಕುಟುಂಬಗಳಿಗೆ ಉಚಿತ ಮನೆ ನಿರ್ಮಾಣ, ಗ್ರಾಮ ಸ್ವಚ್ಛತೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸಿ.ಕೆ.ಬಾಲಮನೋಹರ, ಎಸ್.ಬಿ.ಶೇಖರ್, ಎಂ.ಬಿ.ಲೋಕನಾಥ್, ಶಕುಂತಲಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ, ಪಿಡಿಒ ಕವಿತಾ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ದೇವರಾಜು, ಯೋಜನಾಧಿಕಾರಿ ಪುಷ್ಪರಾಜ್, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.