ಪ್ರಸಾದ್ ಯೋಜನೆ ಕುರಿತು ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿ.ಟಿ.ದೇವೇಗೌಡ, ಜಿ.ಲಕ್ಷ್ಮೀಕಾಂತರೆಡ್ಡಿ, ಎಸ್.ಯುಕೇಶ್‌ಕುಮಾರ್, ಸೀಮಾ ಲಾಟ್ಕರ್ ಇದ್ದರು.
- ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಅಭಿವೃದ್ಧಿ ಮಾಡಲಾಗುತ್ತಿದೆ
- ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುತ್ತಿದೆ
ಮೈಸೂರು:ಚಾಮುಂಡಿಬೆಟ್ಟದಲ್ಲಿ ಪ್ರಸಾದ್ ಯೋಜನೆ ಅಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯಿಂದ ದೇವಸ್ಥಾನದ ಪಾರಂಪರಿಕತೆಗೆ ಯಾವುದೇ ಧಕ್ಕೆ ಅಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಾದ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಟ್ಟದ ಪರಿಸರ, ದೇವಸ್ಥಾನಕ್ಕೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದರು
ಬೆಟ್ಟದಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಬೆಟ್ಟದ ನಿವಾಸಿಗಳಿಗೆ ತೊಂದರೆ ಆಗಿದ್ದರೆ ಆ ಕುರಿತು ಅಹವಾಲು ಸಲ್ಲಿಸಿದರೆ ಸೂಕ್ತ ಸಲಹೆಗಳನ್ನು ಪಡೆದು ಅದರಂತೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಗಣ್ಯರು ದೇವಸ್ಥಾನದ ದರ್ಶನಕ್ಕೆ ಭೇಟಿ ನೀಡಿದಾಗ ಅವರೊಂದಿಗೆ 50 ಜನ ಬೆಂಬಲಿಗರು ನುಗ್ಗುವುದರಿಂದ ಗೊಂದಲ ಉಂಟಾಗುತ್ತದೆ. ಇದಕ್ಕೆ ಒಂದು ಪರಿಹಾರ ರೂಪಿಸಬೇಕು. ದೇವಸ್ಥಾನದ ಪ್ರವೇಶಕ್ಕೆ ಒಂದು ಕಡೆ ಒಳಗೆ, ಮತ್ತೊಂದು ಕಡೆ ಹೊರಗೆ ಬರಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಬೆಟ್ಟದ ಮಳಿಗೆಗಳನ್ನು ಮೂಲದಲ್ಲಿ ಇದ್ದ ಅರ್ಹರಿಗೆ ಮಾತ್ರ ನೀಡಬೇಕು. ಆದರೆ ಪ್ರಭಾವ ಬಳಸಿ ಹಲವರು ಮಳಿಗೆ ಪಡೆದಿದ್ದಾರೆ. ಇದರಿಂದ ಮೂಲ ಮಳಿಗೆದಾರರಿಗೆ ತೊಂದರೆ ಅಗಿದೆ. ಅದನ್ನು ಸರಿಪಡಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಪ್ರಸಾದ್ ಯೋಜನೆಯಡಿ 45.70 ಕೋಟಿ ರೂ. ಅನುದಾನ ಮಂಜೂರಾಗಿದೆ. ಸುಗಮ ದರ್ಶನಕ್ಕೆ ವ್ಯವಸ್ಥೆಗಾಗಿ ಸರತಿ ಸಾಲಿಗೆ ಕಲ್ಲಿನ ಕ್ಯೂ ಮಂಟಪ ಮಾಡಲಾಗುತ್ತಿದೆ. ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಕ್ಯೂ ಬಂದು ದೇವಸ್ಥಾನದ ಮುಂಭಾಗದಲ್ಲಿ ಬಂದು ಸೇರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಇತರರಿದ್ದರು.