ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ ವಿಶೇಷ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಐದು ವರ್ಷ ಯಶಸ್ವಿಯಾಗಿ ಆಡಳಿತ ಮುಗಿಸಿದ ಸದಸ್ಯರರನ್ನು ಸನ್ಮಾನಿಸಲಾಯಿತು.
ಬೆಟ್ಟದಪುರ: ಚುನಾಯಿತ ಪ್ರತಿನಿಧಿಗಳ ಸಹಕಾರವಿದ್ದರೆ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಹಾರನಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಪಿ.ಧನಂಜಯ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳ ಜತೆ ಪ್ರತಿಯೊಬ್ಬರ ಸಹಕಾರ ಇದ್ದರೆ, ಗ್ರಾಮಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದರು.
ನಾಲ್ಕೈದು ವರ್ಷಗಳಿಂದ ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಮೂಲಕ ಸುಮಾರು 15 ಕೀ.ಮೀ.ವರೆಗೆ ಮೆಟ್ಲಿಂಗ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ಮೂರು ನೂರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಅನುದಾನ ಕಲ್ಪಿಸಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿಯು ಸದಸ್ಯರ, ಸಿಬ್ಬಂದಿ ಸಹಕಾರದಿಂದ ಎಲ್ಲ ಕಾರ್ಯಗಳನ್ನು ಮಾಡುವ ಮೂಲಕ ಆರೋಗ್ಯ ಸೇವೆ ಒದಗಿಸಲಾಗಿತ್ತು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಆರ್.ಚಂದ್ರೆಗೌಡ ಮಾತನಾಡಿ, ಸರ್ವ ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅವರಂತೆ ನನ್ನ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುವ ಮೂಲಕ ಸೇವೆ ಸಲ್ಲಿಸಿದ್ದೇನೆ ಎಂದರು.
ಐದು ವರ್ಷ ಸೇವೆ ಸಲ್ಲಿಸಿ ಆಡಳಿತ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ಸದಸ್ಯರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಇದೇವೇಳೆ ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಚ್.ಜಿ.ಅನಿಲ್ ಕುಮಾರ್, ಸದಸ್ಯರಾದ ಎಂ.ಎಂ. ರವೀನಾ , ಶೇಖರ್, ಕಮಲಮ್ಮ, ರೇಣುಕಾ, ಸುರೇಶ ಅಡಗೂರು, ಶೀಲಾಮಣಿ, ಚತುರಾ, ಮಹದೇವಮ್ಮ, ಬಿ.ಎಸ್.ಕೃಷ್ಣೆಗೌಡ, ಯಶೋಧಮ್ಮ, ಅಶ್ವಿನಿ, ಬಿಲ್ ಕಲೆಕ್ಟರ್ ನಂಜೇಗೌಡ, ಕ್ಲರ್ಕ್ ಕಿರಣ್, ಸಿಬ್ಬಂದಿ ರವಿ, ಸುನೀಲ್, ಮಲ್ಲೇಶಚಾರಿ, ಸದಾಶಿವ, ಮಹದೇವಪ್ಪ, ಸುರೇಶ, ಅಕ್ಷತಾ, ದಿವ್ಯಾ ಸೇರಿದಂತೆ ಇತರರು ಇದ್ದರು.