ಬೆಟ್ಟದಪುರ ಸಮೀಪದ ಅನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ ಚರ್ಚಾ ಸ್ಪರ್ಧೆಯನ್ನು ಗಣ್ಯರು ಉದ್ಘಾಟಿಸಿದರು.
ಬೆಟ್ಟದಪುರ: ಆಧುನಿಕ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ದೇಶದ ಅಭಿವೃದ್ಧಿಗೆ ಎಐ ತಂತ್ರಜ್ಞಾನ ಮಾರಕವೇ ಅಥವಾ ಪೂರಕವೇ? ಎಂಬ ವಿಷಯ ಕುರಿತ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನು ಆಧುನಿಕ ತಂತ್ರಜ್ಞಾನದ ಮೂಲಕ ಸಾಕಷ್ಟು ಬೌದ್ಧಿಕ ಬೆಳವಣಿಗೆ ಸಾಧಿಸಿದ್ದಾನೆ. ಇಂದಿನ ದಿನಗಳಲ್ಲಿ ಅಭಿವೃದ್ಧಿಗೆ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಆದರೆ ತಂತ್ರಜ್ಞಾನದಲ್ಲಿರುವ ಅನುಕೂಲಗಳನ್ನು ಮಾತ್ರ ಬಳಸಿಕೊಳ್ಳುವ ಜತೆಗೆ ಅದರ ದುರುಪಯೋಗ ಹಾಗೂ ಅನನುಕೂಲಗಳಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.
ಅನಿಕೇತನ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಡಾ.ಜೆ ಸೋಮಣ್ಣ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನದ ಮೂಲಕ ಜ್ಞಾನವನ್ನು ಸಂಪಾದಿಸಬಹುದಾದರೂ ಅದರ ಅನಾನುಕೂಲಗಳು ಹಾಗೂ ದುರುಪಯೋಗದ ಬಗ್ಗೆಯೂ ಅರಿವು ಹೊಂದಿರಬೇಕು. ವಿದ್ಯಾಭ್ಯಾಸದಿಂದ ಹಿಡಿದು ಜೀವನದ ಪ್ರತಿಯೊಂದು ಹಂತದಲ್ಲೂ ತಂತ್ರಜ್ಞಾನ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಪೂರಕವಾಗುವ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಬಿ.ರವಿಚಂದ್ರ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿನ ನೈಜ ಸಂಗತಿಗಳನ್ನು ಜನರಿಗೆ ತಿಳಿಸುವ ಮೂಲಕ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಎಐ ತಂತ್ರಜ್ಞಾನದ ಬಳಕೆ ಕುರಿತು ಅರಿವು ಮೂಡಿಸುವ ಹಾಗೂ ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಚರ್ಚಾ ಸ್ಪರ್ಧೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅನಿಕೇತನ ಪಿಯು ಕಾಲೇಜಿನ ಅಧ್ಯಕ್ಷ ಅಪ್ಪಣ್ಣ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಸ್ವಾಮಿ ಬಾವಾಲಾಳು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಕಾರ್ಯದರ್ಶಿ ದೇವೇಗೌಡ, ರಂಗಕರ್ಮಿ ಬರಮಣ್ಣ ಬೆಟಗೇರಿ, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪಾಂಡು ಸೇರಿದಂತೆ ಪದಾಧಿಕಾರಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಫಲಿತಾಂಶ: ಚರ್ಚಾ ಸ್ಪರ್ಧೆಯಲ್ಲಿ ಬೆಟ್ಟದಪುರದ ಎಸ್‌ಎಂಎಸ್, ಡಿಟಿಎಂಎನ್, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪಿರಿಯಾಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭವಾನಿ ಎಸ್‌ಎಂಎಸ್ ಕಾಲೇಜು(ಪ್ರ), ಶ್ರಾವ್ಯಾ, ಅನಿಕೇತನ ಕಾಲೇಜು (ದ್ವಿ), ಸೃಷ್ಟಿ ಪ್ರಕಾಶ್ ಪಿರಿಯಾಪಟ್ಟಣ ಡಿಪಿಬಿಎಸ್ ಕಾಲೇಜು (ತೃ), ವಸಂತಾ ಬೆಟ್ಟದಪುರ ಎಸ್‌ಎಂಎಸ್ ಪಿಯು ಕಾಲೇಜು(ನಾ) ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಶಿಕ್ಷಕರಾದ ಕೆಂಪರಾಜು, ಮಹೇಶ್ ಹಾಗೂ ಶಿಲ್ಪಾ ಕಾರ್ಯನಿರ್ವಹಿಸಿದರು.