ರಾಮಕೃಷ್ಣನಗರ ಎಚ್.ಬ್ಲಾಕ್‌ನ ಆರೋಗ್ಯ ಬಡಾವಣೆ ಉದ್ಯಾನದಲ್ಲಿ ನಗರಪಾಲಿಕೆ ಹಾಗೂ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿ.ಟಿ.ದೇವೇಗೌಡ ಗಿಡ ನೆಟ್ಟರು. ಜಿ.ಲಕ್ಷ್ಮೀಕಾಂತರೆಡ್ಡಿ, ಶೇಖ್ ತನ್ವೀರ್ ಆಸಿಫ್, ಸಿ.ರವಿಶಂಕರ್, ಜಿ.ಪರಮೇಶ್, ಎಸ್.ಲೋಕೇಶ್ ಇತರರು ಇದ್ದರು.
- ಬದಲಾದ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅದರ ಜತೆಗೆ ನಮ್ಮ ಪರಿಸರ, ನೈಸರ್ಗಿಕ ಸಂಪತ್ತು ಉಳಿಸಬೇಕು
- ಜನರು ವಾಯುವಿಹಾರ ಮಾಡುವ ಜತೆಗೆ ಗಿಡಗಳನ್ನು ದತ್ತು ಪಡೆದು ಪೋಷಣೆ ಮಾಡಬೇಕು
ಮೈಸೂರು:ಬದಲಾದ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೂ ನಮ್ಮಲ್ಲಿನ ನೈಸರ್ಗಿಕ ಸಂಪತ್ತು, ಮರ, ಗಿಡಗಳನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ರಾಮಕೃಷ್ಣನಗರ ಎಚ್.ಬ್ಲಾಕ್‌ನ ಆರೋಗ್ಯ ಬಡಾವಣೆ ಉದ್ಯಾನದಲ್ಲಿ ನಗರಪಾಲಿಕೆ ಹಾಗೂ ಅರಣ್ಯ ಇಲಾಖೆಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಗಿಡನೆಟ್ಟು ಅವರು ಮಾತನಾಡಿದರು.
ಪರಿಸರ ಉಳಿಸಿದರೆ ನೈಸರ್ಗಿಕ ಗಾಳಿಯಿಂದ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ನಾವು ಮರ-ಗಿಡಗಳನ್ನು ನಾಶ ಮಾಡದೆ ಪ್ರಕೃತಿ ಉಳಿಸಿಕೊಳ್ಳಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ನಾವು ಏನಾದರೂ ಕೊಡುಗೆ ನೀಡುವಂತಹ ಕೆಲಸ ಮಾಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅದರ ಜತೆಗೆ ನಮ್ಮ ಪರಿಸರ, ನೈಸರ್ಗಿಕ ಸಂಪತ್ತು, ಮರ-ಗಿಡಗಳನ್ನು ಉಳಿಸಿಕೊಳ್ಳಬೇಕು. ಮಹಾರಾಜರ ಕಾಲದಿಂದ ಉಳಿಸಿಕೊಂಡು ಬಂದಿರುವ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ನಗರಪಾಲಿಕೆಯ ಹಲವು ಉದ್ಯಾನಗಳಲ್ಲಿ ಗಿಡಗಳನ್ನು ನೆಟ್ಟು ಸುಂದರಗೊಳಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ನಗರಪಾಲಿಕೆಯಿಂದ 15 ಸಾವಿರ ಗಿಡಗಳನ್ನು ಏಕಕಾಲದಲ್ಲಿ ನೆಡುವ ತೀರ್ಮಾನ ಮಾಡಿರುವುದು ಉತ್ತಮ ಕಾರ್ಯ. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವುದು ಮುಖ್ಯವಲ್ಲ. ಅವುಗಳನ್ನು ಪೋಷಿಸಬೇಕಿದೆ. ಅಲ್ಲದೆ, ಶಿಥಿಲ ಮರಗಳನ್ನು ತೆರವುಗೊಳಿಸುವಾಗ ಪ್ರಾಣಾಪಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಠದಿಂದಲೇ ಐದು ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಕೊಡಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ನಾನು, ಇಲವಾಲದಿಂದ ಕುಶಾಲನಗರದವರೆಗೆ ಸಸಿಗಳನ್ನು ನೆಡುವಂತೆ ಮಾಡಿದ್ದರಿಂದಾಗಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿವೆ. ಹುಣಸೂರಿನಿಂದ ಕೆ.ಆರ್.ನಗರ, ಹುಣಸೂರಿನಿಂದ ಹನಗೋಡು ಮಾರ್ಗದವರೆಗೂ ಸಸಿಗಳನ್ನು ನೆಡುವಂತೆ ಮಾಡಿದ್ದರಿಂದಾಗಿ ದೊಡ್ಡ ಮರಗಳಾಗಿ ಬೆಳೆದಿವೆ ಎಂದು ಹೇಳಿದರು.
ಪರಿಸರವನ್ನು ಕಾಪಾಡಿಕೊಳ್ಳಲು ತಮ್ಮ ಮನೆ, ಹೊರಗೆ ಮತ್ತು ಬೀದಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಒಬ್ಬೊಬ್ಬರು ಒಂದೊಂದು ಗಿಡವನ್ನು ಬೆಳೆಸಬೇಕು. ಸ್ಥಳೀಯ ಜನರು ವಾಯುವಿಹಾರ ಮಾಡುವ ಜತೆಗೆ ಗಿಡಗಳನ್ನು ದತ್ತು ಪಡೆದು ಪೋಷಣೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಇತರರು ಇದ್ದರು.