ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರೊ.ಎನ್.ನಾಗರಾಜು ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಆರ್.ಮಹೇಶ್, ಪ್ರೊ.ಎಸ್.ಡಿ.ಶಶಿಕಲಾ, ರಾಘವೇಂದ್ರ ಪತ್ತಾತ್ ಇದ್ದರು.
- ಪಿಎಚ್.ಡಿ ಮುಗಿಸಿದವರು ಕೂಡ ಇಂದು ಸೂಕ್ತ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ
- ವಿದ್ಯೆ ಜೊತೆಗೆ ಸಂವಹನ ಮತ್ತು ಕೌಶಲಗಳನ್ನು ರೂಢಿಸಿಕೊಳ್ಳಬೇಕು
ಮೈಸೂರು:ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳು ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಹತಾಶೆಗೆ ಒಳಗಾಗದೆ ಉದ್ಯೋಗಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಸಲಹೆ ನೀಡಿದರು.
ಮಾನಸಗಂಗೋತ್ರಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಶಲ, ಅಭಿವ್ಯಕ್ತಿ ಮತ್ತು ಸಂವಹನದ ರಾಷ್ಟ್ರೀಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ನಾತಕೋತ್ತರ ಪದವಿ, ಪಿಎಚ್.ಡಿ ಮುಗಿಸಿದವರು ಕೂಡ ಇಂದು ಸೂಕ್ತ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನಶೀಲತೆಯ ಜತೆಗೆ ಪ್ರಸ್ತುತ ಕಾಲಮಾನದಲ್ಲಿ ಸಂವಹನ ಮತ್ತು ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಆಗ ಯಶಸ್ವು ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಸಂವಹನ ಮತ್ತು ಕೌಶಲ ಕೊರತೆಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಹತೆಗೆ ತಕ್ಕಂತೆ ಇಂದು ಉದ್ಯೋಗಗಳು ಸಿಗುತ್ತಿಲ್ಲ. ಇದಕ್ಕೆ ವಿದ್ಯಾರ್ಥಿಗಳು ಹತಾಶೆಗೆ ಒಳಗಾಗಬಾರದು. ಉದ್ಯೋಗಳಿಗೆ ತಕ್ಕಂತೆ ಕೌಶಲ ಬಳಸಿಕೊಳ್ಳಬೇಕು ಎಂದರು.
ಕನ್ನಡ ಎಂಎ ಮಾಡಿದ ವಿದ್ಯಾರ್ಥಿಗಳಿಗೆ ಸರಿಯಾಗಿ ಕನ್ನಡ ಬರೆಯಲು ಬರುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹಳೆಯ ವಿದ್ಯಾರ್ಥಿಗಳು ಮಾಡಿದ ತಪ್ಪುಗಳನ್ನು ಇಂದಿನ ವಿದ್ಯಾರ್ಥಿಗಳು ಮಾಡಬಾರದು ಎಂದು ಹೇಳಿದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಎಐ ಮಾಹಿತಿಯನ್ನು ಕ್ರೋಡೀಕರಿಸುವ ಕೆಲಸ ಮಾಡುತ್ತದೆಯೇ ಹೊರತು, ಕನ್ನಡ ಸಾಹಿತ್ಯದ ಭಾಷೆಯ ಕೆಲಸವನ್ನು ಎಐ ಮಾಡುವುದಿಲ್ಲ. ಆದ್ದರಿಂದ ಸಾಹಿತ್ಯ ಬರವಣಿಗೆ ಯಾವಾಗಲು ಬೇಡಿಕೆ ಇದ್ದೇ ಇರುತ್ತದೆ ಎಂದರು.
ಇವತ್ತಿನ ಸಮಸ್ಯೆಗೆ ಭಾವನಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಮತ್ತು ಮನುಷ್ಯತ್ವ ತೋರಿಸುವುದು ಕೃತಕ ಬುದ್ಧಿಮತ್ತೆಯಿಂದ ಸಾಧ್ಯವಿಲ್ಲ. ನೈಜ ಬುದ್ಧಿಮತ್ತೆ ಮಾತ್ರ ಸಾಧ್ಯ. ಹೀಗಾಗಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಉದ್ಯೋಗಗಳು ತೆರೆದುಕೊಳ್ಳಲಿವೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ವೃತ್ತಿ ಕೇಂದ್ರದ ಸಂಯೋಜಕ ಪ್ರೊ.ಆರ್.ಮಹೇಶ್, ಪ್ರೊ.ಎಸ್.ಡಿ.ಶಶಿಕಲಾ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಪತ್ತಾತ್ ಇದ್ದರು.