ಜಿಲ್ಲಾಡಳಿತ, ಸರ್ಕಾರಿ ನೌಕರರ ಸಂಘದಿಂದ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ 2023 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿ.ಲಕ್ಷ್ಮೀಕಾಂತರೆಡ್ಡಿ, ಯುಕೇಶ್‌ಕುಮಾರ್, ಡಾ. ಸಿ.ಪಿ.ಅರುಣ್‌ಕುಮಾರ್, ಎಂ.ಡಿ ಸುದರ್ಶನ, ಮಾಲಂಗಿ ಸುರೇಶ್, ಪಿ.ರಾಘವೇಂದ್ರ ಇತರರಿದ್ದರು.
- ನೂತನ ತಂತ್ರಜ್ಞಾನದ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿದೆ
- ಪ್ರಶಸ್ತಿ ನೀಡುವುದರಿಂದ ನೌಕರರಲ್ಲಿ ಕೆಲಸ ನಿರ್ವಹಣೆಗೆ ಇನ್ನೂ ಹೆಚ್ಚಿನ ಹುರುಪು ತುಂಬಿದಂತಾಗುತ್ತದೆ
ಮೈಸೂರು:ಕಾಲಮಾನ ಬದಲಾವಣೆಯಾದಂತೆ ಸರ್ಕಾರಿ ಕೆಲಸದಲ್ಲಿ ಸವಾಲುಗಳೂ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಕೆಲಸದಲ್ಲಿ ಕೌಶಲ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸಲಹೆ ನೀಡಿದರು.
ಜಿಲ್ಲಾಡಳಿತ, ಸರ್ಕಾರಿ ನೌಕರರ ಸಂಘದಿಂದ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ 2023ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಿನ ಕಳೆದಂತೆ ಕೆಲಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದ್ದು, ಅದಕ್ಕೆ ತಕ್ಕಂತೆ ಕೆಲಸದಲ್ಲಿ ಕೌಶಲ ಅಳವಡಿಸಿಕೊಳ್ಳಬೇಕಿದೆ. ಈ ಮೂಲಕ ಎದುರಾಗುವ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಖಾಸಗಿ ಸಂಸ್ಥೆಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ಬೋನಸ್ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸರ್ಕಾರಿ ಕೆಲಸದಲ್ಲಿ ಪ್ರಶಸ್ತಿ ನೀಡುವುದರಿಂದ ನೌಕರರಲ್ಲಿ ಕೆಲಸ ನಿರ್ವಹಣೆಗೆ ಇನ್ನೂ ಹೆಚ್ಚಿನ ಹುರುಪು ತುಂಬಿದಂತಾಗುತ್ತದೆ. ಪ್ರಶಸ್ತಿ ಪಡೆದ ನೌಕರರು ತಮ್ಮ ಸಹೋದ್ಯೋಗಿಗಳಿಗೆ ಮಾದರಿಯಾಗಿ ಅವರಿಗೂ ಪ್ರಶಸ್ತಿ ಪಡೆಯುವಂತೆ ಪ್ರೇರಣೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಯುಕೇಶ್‌ಕುಮಾರ್ ಮಾತನಾಡಿ, ಒಂದು ರಾಜ್ಯ ಅಥವಾ ರಾಷ್ಟ್ರದ ಅಭಿವೃದ್ಧಿ ಸಾಧಿಸಲು ಎಲ್ಲ ಇಲಾಖೆಯ ನೌಕರರ ವರ್ಗದ ಪಾತ್ರ ಪ್ರಮುಖವಾಗಿರುತ್ತದೆ. ಅಂತಹ ನೌಕರರನ್ನು ಗುರುತಿಸಿ ಅವರ ಕಠಿಣ ಪರಿಶ್ರಮ, ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆಯನೆಲ್ಲ ಪರಿಗಣಿಸಿ ಅದನ್ನು ನಾವು ಗೌರವಿಸಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಭೇಟಿ ನೀಡುವುದು ಸಾಮಾನ್ಯ. ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ಎಚ್ಚರಿಕೆಯಿಂದ ಲೋಪವಾಗದಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಪ್ರಶಸ್ತಿ ಪಡೆದವರು ಇತರ ಅಧಿಕಾರಿಗಳು, ಸಿಬ್ಬಂದಿಗೆ ಮಾದರಿಯಾಗಿ ಅವರನ್ನು ಸಹ ಪ್ರಶಸ್ತಿ ಪಡೆಯುವಂತೆ ರೂಪಿಸಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಪಿ.ಅರುಣ್ ಕುಮಾರ್ ಮಾತನಾಡಿ, ಕೆಲಸ ಕಾರ್ಯಗಳನ್ನು ಪ್ರೋತ್ಸಾಹಿಸುವ ಪದ್ಧತಿ ಇರಬೇಕು. ಆಗ ಮಾತ್ರ ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಬಹುದು. ಸರ್ಕಾರಿ ನೌಕರರಿಗೆ 2006 ರಿಂದ ನಾಗರಿಕರ ಸೇವಾ ಪ್ರಶಸ್ತಿ ನೀಡುವ ಪದ್ಧತಿ ಪ್ರಾರಂಭವಾಯಿತು. 2006ರಲ್ಲಿ ಪ್ರಶಸ್ತಿ ಮಾತ್ರ ನೀಡಲಾಗುತ್ತಿತ್ತು. 2021ರಿಂದ ನಗದು ಮತ್ತು ಪ್ರಶಸ್ತಿ ಸಹ ನೀಡಿ ಗೌರವಿಸಲಾಗುತ್ತಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಜೆ ಗುರುರಾಜ್, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕಿ ಎನ್.ಯಶೋದಾ, ಆರೋಗ್ಯ ಇಲಾಖೆಯ ಹಿರಿಯ ಶುಶ್ರೂಷಕಿ ಎಂ.ಎಂ.ರತಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಎಸ್. ಚಿದಂಬರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಿಸ್ಟಮ್ ಅನಾಲಿಸ್ಟ್, ಎನ್‌ಎಸ್‌ಎಸ್ ಆಫೀಸರ್‌ಎಸ್.ಎಂ.ಮಧುಸೂದನ್, ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮದಾ ಶರತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಆರೋಗ್ಯ ಇಲಾಖೆಯ ಶುಶ್ರೂಷಕಿ ರೂಪಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರುದ್ರೇಶ್ ಒಟ್ಟು 10 ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ ಸುದರ್ಶನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಮಾಲಂಗಿ ಸುರೇಶ್, ಮೈಸೂರು ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷ ಪಿ.ರಾಘವೇಂದ್ರ, ರಾಜ್ಯ ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷರಾದ ವಿಶ್ವನಾಥ್, ಪುಷ್ಪವತಿ ಇತರರಿದ್ದರು.