ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಪ್ರೊ.ಕಾಳೇಗೌಡ ನಾಗವಾರ, ನಾ.ದಿವಾಕರ, ವಿ.ನಾಗರಾಜ, ಗಿರಿಜಾ ಇತರರಿದ್ದರು. 
ಮೈಸೂರು

ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಪ್ರೊ.ಕಾಳೇಗೌಡ ನಾಗವಾರ ಸಲಹೆ
ಗ್ರಂಥಾಲಯ ಮತ್ತು ಶಿಕ್ಷಣ ಕೇಂದ್ರಗಳೇ ಹೊಸ ಕಾಲದ ದೇವಾಲಯಗಳು. ಅವುಗಳನ್ನು ಬೆಳೆಸುವ ಕೆಲಸವಾಗಬೇಕು ಎಂದು ಚಿಂತಕ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.
ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯು ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುತ್ವ ಭಾರತ ಮತ್ತು ಸಂವಿಧಾನವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳು ಎಂಬ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಉತ್ತರಾಧಿಕಾರಿಯಾಗಿ ಕೆಲಸ ಮಾಡಿದ್ದ ಬಸವಲಿಂಗಪ್ಪ ಅವರ ಜನ್ಮಶತಾಬ್ಧಿ ಆಚರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಶೋಷಿತರ ಪರವಾಗಿ ಕೆಲಸ ಮಾಡಿದ ಚೇತನಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ತಲೆ ಮೇಲೆ ಮಲ ಹೋರುವ ಪದ್ಧತಿ ಸತತ ಹೋರಾಟದಿಂದ ಕೊನೆಯಾಯಿತು. ಆದರೆ ತಲೆಯೊಳಗಿರುವ ಮಲ ಇರುವ ವರೆಗೆ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯವಿಲ್ಲ. ಸಮಾನತೆ ಹಾಗೂ ಸಹೋದರತ್ವ ಎಲ್ಲರ ಅಂತಿಮ ಗುರಿಯಾಗಬೇಕು. ಈ ಭಾವನೆ ಜನಮಾನಸದಲ್ಲಿ ಮೂಡಲು ಶ್ರಮಿಸಬೇಕಿದೆ. ಪ್ರಸ್ತುತ ಇರುವ ಸಮಸ್ಯೆಗಳಿಗೆ ಹೊಸ ರೂಪದ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಅನ್ಯಾಯಗಳನ್ನು ಸಹಿಸದೆ, ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದರಿಂದ ಶೋಷಣೆ ಕಡಿಮೆಯಾಗಬಹುದು ಎಂದರು.
ಚಿಂತಕ ನಾ.ದಿವಾಕರ, ಸಂಘಟನೆಯ ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜ, ಸಂಯೋಜಕಿ ಗಿರಿಜಾ, ಸಾಹಿತಿ ಕೆ.ಪಿ.ಮಹಾಲಿಂಗು ಕಲ್ಕುಂದ, ಎಚ್.ಎನ್.ಅಣ್ಣಯ್ಯ ಇದ್ದರು.