ಜಯನಗರದ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ.ಎಸ್.ಶ್ರೀವತ್ಸ, ಎಂ.ಎಸ್. ನಾಗೇಶ್, ಭವಾನಿ ನಾಗೇಶ್, ಎಚ್.ಎಂ. ಸುಮ, ವಿಶ್ವಾಸ್ ಪ್ರೇಮ್ಕುಮಾರ್ ಇತರರು ಇದ್ದರು.
- ಭವಿಷ್ಯದಲ್ಲಿ ಉತ್ತಮ ನಾಯಕತ್ವ ಉಳ್ಳ ಯುವಕರ ಅವಶ್ಯಕತೆ ತುಂಬಾ ಮಹತ್ವದ್ದಾಗಿದೆ
- ಚುನಾವಣಾ ಪ್ರಕ್ರಿಯೆಗಳ ಜ್ಞಾನ ಒದಗಿಸಿ ಭವಿಷ್ಯದ ಉತ್ತಮ ನಾಯಕರನ್ನು ಬೆಳಸಲು ಬೆಂಬಲಿಸಬೇಕು
ಮೈಸೂರು:ಶಾಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗಳು ಚಿಕ್ಕವಯಸ್ಸಿನಿಂದಲೇ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಜಯನಗರದ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಬೋಧನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ರಕ್ಷಣೆ ಹಾಗೂ ಆಡಳಿತದ ಕ್ಷೇತ್ರಕ್ಕೆ ಭವಿಷ್ಯದಲ್ಲಿ ಉತ್ತಮ ನಾಯಕತ್ವ ಉಳ್ಳ ಯುವಕರ ಅವಶ್ಯಕತೆ ತುಂಬಾ ಮಹತ್ವದ್ದಾಗಿದೆ. ಅಂತಹ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಲು ಅವಕಾಶ ನೀಡುವ ಮೂಲಕ ಚುನಾವಣಾ ಪ್ರಕ್ರಿಯೆಗಳ ಜ್ಞಾನ ಒದಗಿಸಿ ಭವಿಷ್ಯದ ಉತ್ತಮ ನಾಯಕರನ್ನು ಬೆಳಸಲು ಬೆಂಬಲಿಸಬೇಕು ಎಂದರು. ಈ ನಿಟ್ಟಿನಲ್ಲಿ ಬಾಲೋದ್ಯಾನ ಪಬ್ಲಿಕ್ ಶಾಲೆ ಕಾರ್ಯ ಪ್ರಶಂಸನೀಯ.
ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆಯ ಪ್ರಕ್ರಿಯೆಗಳು ಮುಂದಾಳತ್ವ, ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ನಾನೂ ವಿಧಾನಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಇದೇ ಮಾದರಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಪ್ರತಿಜ್ಞಾವಿಧಿ ಕೈಗೊಂಡು ಸದನದ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕರ್ತವ್ಯ ನಿರ್ವಹಿಸುವಾಗ ಹಲವು ವೇಳೆ ಸಣ್ಣಪುಟ್ಟ ತಪ್ಪುಗಳು ಆಗುವುದು ಸಹಜ. ಹಾಗಾಗಿ ಅಂತಹ ತಪ್ಪುಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎಸ್. ನಾಗೇಶ್ ಮಾತನಾಡಿ, ಉತ್ತಮ ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಬೆಳೆಸಿಕೊಳ್ಳುವುದರಿಂದ ಸಂಘಟನಾ ಸಾಮರ್ಥ್ಯ, ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಧೈರ್ಯ, ಮುಂತಾದ ಮೌಲ್ಯಯುತ ಗುಣಗಳು ರೂಪಗೊಳ್ಳುತ್ತವೆ ಎಂದು ಹೇಳಿದರು.
ಆಡಳಿತ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲೆ ಎಚ್.ಎಂ. ಸುಮಾ, ವಿದ್ಯಾರ್ಥಿ ಚುನಾವಣೆಯಲ್ಲಿ ಜಯಗಳಿಸಿದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಶೈಕ್ಷಣಿಕ ಸಂಯೋಜಕ ವಿಶ್ವಾಸ್ ಪ್ರೇಮ್ಕುಮಾರ್, ಶಿಕ್ಷಕಿ ಅನುಷಾ, ವಿದ್ಯಾರ್ಥಿ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಹಾಗೂ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.