ಬೆಟ್ಟದಪುರ ಸಮೀಪದ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಸ್. ರವಿ, ಡಿ.ಬಿ ಸರೋಜಾ, ತಿಪ್ಪೇಸ್ವಾಮಿ, ವಿಜಯ್ ಕುಮಾರ್, ಶಿವಶಂಕರ್ ಇತರರಿದ್ದರು. 
ಮೈಸೂರು

ಜೀವನದಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಿ

ಬೆಟ್ಟದಪುರ:

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ಎಚ್.ಎಸ್. ರವಿ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಟ್ಟದಪುರ ಯೋಜನಾ ಕಚೇರಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಟ್ಟ ಹವ್ಯಾಸಗಳು ನಮ್ಮ ಮನಸ್ಸಿಗೆ ಅಶಾಂತಿ ಉಂಟು ಮಾಡುವುದಲ್ಲದೆ ಕುಟುಂಬದಲ್ಲಿಯೂ ನೆಮ್ಮದಿ ನೀಡುವುದಿಲ್ಲ. ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿ ಕೆಲವೊಮ್ಮೆ ಸಾವು ಸಹ ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಿ ಕೆಟ್ಟ ಹವ್ಯಾಸಗಳಿಂದ ದೂರವಿದ್ದು, ಇತರರಿಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿ ಒಂದು ಉತ್ತಮ ಸಮಾಜ ನೀಡುವಲ್ಲಿ ಸಹಕರಿಸಬೇಕು ಎಂದರು.
ಶಾಲಾ ಮುಖ್ಯಶಿಕ್ಷಕಿ ಡಿ.ಬಿ. ಸರೋಜಾ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲೆಗಳಲ್ಲಿ ನಡೆಯುವ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿಕ್ಷಕರಾದ ತಿಪ್ಪೇಸ್ವಾಮಿ, ವಿಜಯ್ ಕುಮಾರ್, ಶಿವಶಂಕರ್, ಅನುಪಮಾ, ಕೃಷಿ ಮೇಲ್ವಿಚಾರಕರಾದ ವಿನಾಯಕ್, ಸೇವಾ ಪ್ರತಿನಿಧಿ ಜ್ಯೋತಿ ಹಾಗೂ ವಿದ್ಯಾರ್ಥಿಗಳು ಇದ್ದರು.